
ಅನಂತಪುರ: ಮಳೆ ನಿರೀಕ್ಷಿತ ಪ್ರಮಾಣದಷ್ಟು ಬಾರದೇ, ಕಾರ್ಮಿಕರ ಕೊರತೆ ಎದುರಾಗಿರುವುದು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಉಂಟುಮಾಡಿದೆ.
ಅನಂತಪುರ ಜಿಲ್ಲೆಯಲ್ಲಿ ಕಾರ್ಮಿಕರು, ಸಂಪನ್ಮೂಲಗಳ ಕೊರತೆಯಿಂದಾಗಿ ಇಬ್ಬರು ಯುವಕರು ತಾವೇ ನೊಗ ಹೊತ್ತು ಉಳುವ ಮೂಲಕ ತಮ್ಮ ತಂದೆಗೆ ಕೃಷಿ ಚಟುವಟಿಕೆಯಲ್ಲಿ ನೆರವಾಗುತ್ತಿರುವ ದೃಶ್ಯ ಕಂಡುಬಂದಿದೆ.
ಕೃಷಿ ಚಟುವಟಿಕೆಗಾಗಿ ಇದ್ದ ಏಕೈಕ ಎತ್ತು ಸಹ ಮೃತಪಟ್ಟ ಹಿನ್ನೆಲೆಯಲ್ಲಿ ನೂತಿಮಡುಗ ಗ್ರಾಮದ ನಿವಾಸಿ ಸರ್ದ್ದನಪ್ಪ ಟೊಮೆಟೊ ಬೆಳೆಯುವುದಕ್ಕೆ ನೊಗ ಹೂಡುವುದಕ್ಕೆ ಬೇರೆ ದಾರಿ ಇಲ್ಲದೇ ತನ್ನ ಮಕ್ಕಳ ಸಹಾಯ ಪಡೆದಿದ್ದಾರೆ.
ಕೂಲಿ ಕಾರ್ಮಿಕರಿಲ್ಲದ ಕಾರಣ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕಳೆದ ವರ್ಷ ಬರಗಾಲ ರೈತರ ಇಳುವರಿ ಮತ್ತು ಲಾಭವನ್ನು ಗಮನಾರ್ಹವಾಗಿ ಕುಂಠಿತಗೊಳಿಸಿದೆ.
ಕಳೆದ ಕೆಲವು ವರ್ಷಗಳಿಂದ, ಅನಿಯಮಿತ ಮಳೆಯಿಂದಾಗಿ ಬೆಳೆಗಳು, ಅದರಲ್ಲೂ ವಿಶೇಷವಾಗಿ ಶೇಂಗಾ ವೈಫಲ್ಯವು ರೈತರಿಗೆ ನಷ್ಟವನ್ನು ತಂದಿದೆ. ಫಸಲು ಚೆನ್ನಾಗಿದ್ದರೂ ಲಾಭದ ಪ್ರಮಾಣ ಕಡಿಮೆಯಾಗಿದೆ. ಹೆಚ್ಚುತ್ತಿರುವ ಕೂಲಿ ವೆಚ್ಚಗಳು ಮತ್ತು ಕೃಷಿ ಕೈಗಳ ಲಭ್ಯತೆಯಿಲ್ಲದಿರುವುದು ರೈತರ ಸಂಕಟಗಳನ್ನು ಹೆಚ್ಚಿಸಿದ್ದು, ಹೆಚ್ಚು ಸಣ್ಣ ಮತ್ತು ಅತಿಸಣ್ಣ ರೈತರ ಸಾಲದ ಪ್ರಮಾಣವೂ ಹೆಚ್ಚಾಗಿದೆ.
ಸರ್ದ್ದನಪ್ಪ ಮತ್ತು ಅವರ ಸಹೋದರರು ಐದು ಎಕರೆ ಜಮೀನು ಹೊಂದಿದ್ದಾರೆ. ಬೋರ್ ವೆಲ್ ನಲ್ಲಿ ಸಿಕ್ಕ ಅಲ್ಪಸ್ವಲ್ಪ ನೀರಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸಿದ್ದಾರೆ. ಬೇರೆ ದಾರಿಯಿಲ್ಲದೆ, ತನ್ನ ಕುಟುಂಬವನ್ನು ಪೋಷಿಸಲು ಅವರು ಸಾಲವನ್ನು ತೆಗೆದುಕೊಳ್ಳಬೇಕಾಯಿತು. ಹೀಗಾಗಿ ಕೃಷಿ ಚಟುವಟಿಕೆಗಳಲ್ಲಿ ಅವರಿಗೆ ಸಹಾಯ ಮಾಡಲು ಅವರು ತಮ್ಮ ಕುಟುಂಬವನ್ನು ಅವಲಂಬಿಸಬೇಕಾಯಿತು.
ಸರ್ದ್ದನಪ್ಪ ಹೈನುಗಾರಿಕೆ ಮತ್ತು ಕೃಷಿ ಕೆಲಸಕ್ಕಾಗಿ ಎರಡು ಹಸುಗಳು ಮತ್ತು ಒಂದು ಎತ್ತು ಖರೀದಿಸಿದ್ದರು ದುರದೃಷ್ಟವಶಾತ್, ಎತ್ತು ಮತ್ತು ಒಂದು ಹಸು ಸಾವನ್ನಪ್ಪಿದೆ. ಸಾಲಗಾರರು ಮರುಪಾವತಿಸುವಂತೆ ಒತ್ತಡ ಹೇರುತ್ತಿದ್ದರಿಂದ ಸಾಲವನ್ನು ತೀರಿಸಲು ಅವರು ಇನ್ನುಳಿದ ಒಂದು ಹಸುವನ್ನು ಮಾರಾಟ ಮಾಡಬೇಕಾಯಿತು.
ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ ರೈತ, “ನನಗೆ ನನ್ನ ಮಕ್ಕಳನ್ನು ಅವಲಂಬಿಸದೇ ಬೇರೆ ದಾರಿಯಿಲ್ಲ. ನನ್ನ ಕುಟುಂಬವನ್ನು ಪೋಷಿಸುವ ಏಕೈಕ ಮಾರ್ಗವೆಂದರೆ ಕೃಷಿ. ಕೆಲವು ವರ್ಷಗಳ ಹಿಂದೆ, ಅಪಘಾತದಲ್ಲಿ ನನ್ನ ಕಾಲು ಮುರಿತವಾಯಿತು, ನಾನು ಭಾರವಾದ ಕೆಲಸವನ್ನು ಮಾಡಲು ಅಸಮರ್ಥನಾಗಿದ್ದೇನೆ ಎಂದು ಹೇಳಿದ್ದಾರೆ.
ಸರ್ದನ್ನಪ್ಪ ಅವರ ಮಕ್ಕಳಾದ ಕಾರ್ತಿಕ್ ಮತ್ತು ರಾಣಾ ಪ್ರತಾಪ್ ಅನುಕ್ರಮವಾಗಿ ದ್ವಿತೀಯ ಪಿಯು ಮತ್ತು 9 ನೇ ತರಗತಿ ಓದುತ್ತಿದ್ದಾರೆ. ಈ ಋತುವಿನಲ್ಲಿ ಟೊಮೇಟೊ ಬೆಳೆಯಲು ಭೂಮಿಯನ್ನು ಸಿದ್ಧಪಡಿಸಲು ಅವರು ತಮ್ಮ ತಂದೆಗೆ ಹಗಲಿರುಳು ಸಹಾಯ ಮಾಡುತ್ತಿದ್ದಾರೆ.
ಕಳೆದ ಖಾರಿಫ್ ಹಂಗಾಮಿನಲ್ಲಿ 70 ಸಾವಿರ ರೂ.ವೆಚ್ಚದಲ್ಲಿ ಬಿತ್ತಿದ್ದ ಎರಡು ಕ್ವಿಂಟಲ್ ಶೇಂಗಾ ಬೆಳೆಯಿಂಡ ಕೇವಲ 30 ಸಾವಿರ ಬಂದಿತ್ತು ಎಂದು ಸರದಣ್ಣಪ್ಪ ವಿವರಿಸಿದರು.
''ಒಂದು ಎಕರೆಯಲ್ಲಿ 75,000 ರೂ. ಬಂಡವಾಳದಲ್ಲಿ ತಂಬಾಕು ಕೃಷಿ ಮಾಡಿದ್ದೆ ಆದರೆ ಇಳುವರಿ ಬಂದಾಗ ಕೇವಲ 38,000 ರೂ ಕೈಸೇರಿತ್ತು. ಹೈನುಗಾರಿಕೆಯೊಂದಿಗೆ ನನ್ನ ಕುಟುಂಬವನ್ನು ಪೋಷಿಸಲು, ಎರಡು ಹಸುಗಳನ್ನು ಖರೀದಿಸಿದ್ದೆ. ಒಂದು ಹಸು ಮೃತಪಟ್ಟರೆ, ನಾನು ಸಾಲವನ್ನು ಮರುಪಾವತಿಸಲು ಇನ್ನೊಂದನ್ನು ಮಾರಾಟ ಮಾಡಬೇಕಾಯಿತು. ವಿದ್ಯುತ್ ನ ಅಸಮರ್ಪಕ ಸರಬರಾಜಿನಿಂದಾಗಿ ನನ್ನ ಕೃಷಿ ಮೋಟಾರು ಪ್ರತಿ ತಿಂಗಳು ಸುಟ್ಟುಹೋಗುತ್ತದೆ, ಇದು ನನ್ನ ಆರ್ಥಿಕ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ, ”ಎಂದು ಸರ್ದ್ದನಪ್ಪ ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ, ದಿನಕ್ಕೆ 150 ರಿಂದ 400 ರೂ.ವರೆಗೆ ಕಾರ್ಮಿಕರ ಲಭ್ಯತೆ ಇರುತ್ತಿತ್ತು ಈಗ, ಮಹಿಳೆಯೊಬ್ಬರು ದಿನಕ್ಕೆ 300 ರಿಂದ 500 ರೂ.ವರೆಗೆ ಶುಲ್ಕ ವಿಧಿಸುತ್ತಾರೆ ಮತ್ತು ಪುರುಷ ಕಾರ್ಮಿಕರು ದಿನಕ್ಕೆ 800 ರಿಂದ 1,000 ರೂ.ಗೆ ಬೇಡಿಕೆ ಸಲ್ಲಿಸುತ್ತಾರೆ ಎಂದು ಈ ಪ್ರದೇಶದ ರೈತರು ವಿವರಿಸಿದ್ದಾರೆ.
Advertisement