
ಪಾಟ್ನಾ: ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ನೀಟ್ ಪೇಪರ್ ಸೋರಿಕೆ ಹಗರಣದಲ್ಲಿ ತಾವು ಭಾಗಿಯಾಗಿರುವ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಆಡಳಿತಾರೂಢ ಎನ್‌ಡಿಎ ನಾಯಕರು ನೀಟ್ ಹಗರಣದಿಂದ ಗಮನ ಬೇರೆಡೆಗೆ ತಿರುಗಿಸಲು ಮತ್ತು ಆರೋಪಿಗಳನ್ನು ರಕ್ಷಿಸಲು ತಮ್ಮ ಹೆಸರನ್ನು ಲಿಂಕ್ ಮಾಡುತ್ತಿದ್ದಾರೆ ಎಂದು ತೇಜಸ್ವಿ ಯಾದವ್ ಅವರು ಹೇಳಿದ್ದಾರೆ.
"ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನನ್ನ ಪಿಎ ಅಥವಾ ಪಿಎಸ್‌ಗೆ ಕರೆ ಮಾಡಿ ವೈಯಕ್ತಿಕವಾಗಿ ವಿಚಾರಣೆ ನಡೆಸಬಹುದು" ಎಂದು ತೇಜಸ್ವಿ ತಮ್ಮ ಸಹಾಯಕರು ಪ್ರಕರಣದಲ್ಲಿ ಆರೋಪಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಮತ್ತು ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಮತ್ತು ಬಿಹಾರ ಸಚಿವ ಶರ್ವಣ್ ಕುಮಾರ್ ಸೇರಿದಂತೆ ಕೆಲವು ಜೆಡಿ-ಯು ನಾಯಕರು, ಪ್ರತಿಪಕ್ಷ ನಾಯಕ ನೀಟ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಿನ್ನೆ ಆರೋಪಿಸಿದ್ದರು.
ಈ ಬಗ್ಗೆ ಇಂದು ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್, "ನಾನು ತನಿಖೆಗೆ ಸಿದ್ಧನಿದ್ದೇನೆ ಮತ್ತು ಮುಚ್ಚಿಡಲು ಏನೂ ಇಲ್ಲ" ಎಂದು ಹೇಳಿದರು.
ತೇಜಸ್ವಿ ಯಾದವ್ ಅವರ ಮಾಜಿ ಆಪ್ತ ಸಹಾಯಕ ಪ್ರೀತಮ್ ಕುಮಾರ್ ಅವರು ಮೇ ಮೊದಲ ವಾರದಲ್ಲಿ ಆರೋಪಿಗಳಲ್ಲಿ ಒಬ್ಬರಿಗೆ ಅತಿಥಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಲು ಪ್ರಯತ್ನಿಸಿದ್ದಾರೆ ಎಂದು ಜೆಡಿ-ಯು ಹೇಳಿದೆ.
Advertisement