ಷೇರು ಮಾರುಕಟ್ಟೆ ಕುಸಿತ: ತನಿಖೆ ಎದುರಿಸಲು ಸಿದ್ಧ ಎಂದ Axis My India ಮುಖ್ಯಸ್ಥ ಪ್ರದೀಪ್ ಗುಪ್ತಾ
ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳ ಬಳಿಕ ಷೇರು ಮಾರುಕಟ್ಟೆಯ ಏರಿಳಿತಗಳು ಹಗರಣವೆಂದು ವಿಪಕ್ಷಗಳು ಆರೋಪಿಸಿರುವ ಬೆನ್ನಲ್ಲೇ ಸಮೀಕ್ಷಾ ಸಂಸ್ಥೆ ಆಕ್ಸಿಸ್ ಮೈ ಇಂಡಿಯಾ ಮುಖ್ಯಸ್ಥ, ಪ್ರದೀಪ್ ಗುಪ್ತಾ, ತಾವು ಎಲ್ಲಾ ರೀತಿಯ ತನಿಖೆಗಳಿಗೆ ಸಿದ್ಧ ಎಂದು ಹೇಳಿದ್ದಾರೆ.
ಸಮೀಕ್ಷೆದಾರರಿಗೆ ಸರ್ಕಾರವು ನಿರ್ದಿಷ್ಟ ನಿಯಮಾವಳಿಗಳನ್ನು ರೂಪಿಸಿದರೆ ಅದು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಹಾಯ ಮಾಡುತ್ತದೆ ಎಂದು ಪ್ರದೀಪ್ ಗುಪ್ತಾ ಹೇಳಿದ್ದಾರೆ.
ಚುನಾವಣೋತ್ತರ ಸಮೀಕ್ಷೆಗಳು ಬಂದಾಗ ಷೇರು ಮಾರುಕಟ್ಟೆಗಳು ಭಾರಿ ಏರಿಕೆ ಕಂಡಿತ್ತು. ಈ ವಿಷಯವಾಗಿ ವಿರೋಧ ಪಕ್ಷಗಳು ಮತ್ತು ಹಲವಾರು ನಾಗರಿಕ ಸಮಾಜದ ಗುಂಪುಗಳು ಬಂಡವಾಳ ಮಾರುಕಟ್ಟೆಗಳ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮತ್ತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸೇರಿದಂತೆ ಸಂಪೂರ್ಣ ತನಿಖೆಗಳನ್ನು ಕೇಳುತ್ತಿವೆ.
ಫಲಿತಾಂಶದ ದಿನದಂದು ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸುವಷ್ಟು ಸಂಖ್ಯೆಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಫಲಿತಾಂಶ ಟ್ರೆಂಡ್ ಸ್ಪಷ್ಟವಾಗುತ್ತಿದ್ದಂತೆಯೇ ಷೇರು ಮಾರುಕಟ್ಟೆ ಕುಸಿತ ಕಂಡಿತ್ತು.
ಪಿಟಿಐ ಸುದ್ದಿ ಏಜೆನ್ಸಿಯ ಪ್ರಧಾನ ಕಛೇರಿಯಲ್ಲಿ ಪಿಟಿಐ ಸಂಪಾದಕರೊಂದಿಗಿನ ಸಂವಾದದಲ್ಲಿ ಗುಪ್ತಾ, ಐದು ವರ್ಷಗಳಿಂದ ಚುನಾವಣಾಧಿಕಾರಿಗಳಿಗೆ ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸಲು ಒತ್ತಾಯಿಸುತ್ತಿರುವುದಾಗಿ ಹೇಳಿದರು. ಆಕ್ಸಿಸ್ ಮೈ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗುಪ್ತಾ, ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ 361-401 ಸೀಟುಗಳನ್ನು ಅಂದಾಜಿಸಿದ್ದರು ಇದಷ್ಟೇ ಅಲ್ಲದೇ ಚುನಾವಣೋತ್ತರ ಸಮೀಕ್ಷೆಗಳನ್ನು ನಿಷೇಧಿಸುವ ಬೇಡಿಕೆಗಳನ್ನು "ಬಾಲಿಶ" ಎಂದು ಹೇಳಿದ್ದು ಪ್ರತಿಯೊಬ್ಬ ನಾಗರಿಕ ಮತ್ತು ಸಂಘಟನೆಯು ಚುನಾವಣಾ ಫಲಿತಾಂಶಗಳನ್ನು ತಿಳಿಯಲು ಬಯಸುತ್ತಾರೆ ಮತ್ತು ಚುನಾವಣೋತ್ತರ ಸಮೀಕ್ಷೆಗಳನ್ನು ನಿಷೇಧಿಸುವುದರಿಂದ ಯಾವುದೇ ಉದ್ದೇಶ ಸಾಕಾರವಾಗುವುದಿಲ್ಲ ಎಂದು ಹೇಳಿದ್ದರು.
"ನಮಗೆ ಸ್ಟಾಕ್ ಮಾರುಕಟ್ಟೆಯೊಂದಿಗೆ ಯಾವುದೇ ಸಂಬಂಧವಿಲ್ಲ ಆದರೆ ಈ ಆರೋಪಗಳ ಬಗ್ಗೆ ತಿಳಿದುಕೊಳ್ಳಲು ನನಗೆ ಸಂತೋಷವಾಗಿದೆ ಏಕೆಂದರೆ ಯಾವುದೇ ತನಿಖೆ ನಡೆದರೂ ಆ ಮೂಲಕ ಜಗತ್ತಿಗೆ ಎಕ್ಸಿಟ್ ಪೋಲ್‌ಗಳನ್ನು ಊಹಿಸಲು ಬಳಸಲಾಗುವ ಎಲ್ಲವನ್ನೂ ಪ್ರದರ್ಶಿಸಲು ನನಗೆ ಅವಕಾಶವನ್ನು ನೀಡುತ್ತದೆ. ಇದು ನಮ್ಮ ರುಜುವಾತುಗಳನ್ನು ತೋರಿಸಲು ನಮಗೆ ಒಂದು ಅವಕಾಶವಾಗಿದೆ, ನಮಗೆ ಅವಕಾಶವನ್ನು ನೀಡುವುದರಿಂದ ನಾನು ತನಿಖೆಯ ಬೇಡಿಕೆಯನ್ನು ಬೆಂಬಲಿಸುತ್ತೇನೆ, ”ಎಂದು ಅವರು ಹೇಳಿದ್ದಾರೆ.
ಜೆಪಿಸಿ ಅಥವಾ ಸೆಬಿಯಿಂದ ತನಿಖೆಗೆ ಮುಕ್ತರಾಗಿದ್ದಾರೆಯೇ ಎಂಬ ಪ್ರಶ್ನೆಗೆ, "ಎಲ್ಲಾ ರೀತಿಯ ತನಿಖೆಗಳನ್ನು ಎದುರಿಸಲು ನಾನು ಮುಕ್ತನಾಗಿದ್ದೇನೆ" ಎಂದು ಗುಪ್ತಾ ಹೇಳಿದ್ದಾರೆ.

