
ನವದೆಹಲಿ: ದೆಹಲಿಗೆ ನೀರು ಹರಿಸುತ್ತಿದ್ದ ಹತ್ನಿಕುಂಡ್ ಬ್ಯಾರೇಜ್ ನ ಎಲ್ಲಾ ಗೇಟ್ ಗಳನ್ನು ಹರಿಯಾಣ ಸರ್ಕಾರ ಮುಚ್ಚಿದ್ದು, ಇದರ ವಿರುದ್ಧ ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವುದಾಗಿ ದೆಹಲಿ ಜಲ ಸಚಿವೆ ಅತಿಶಿ ಹೇಳಿದ್ದಾರೆ.
ತೀವ್ರ ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ದೆಹಲಿಗೆ ನೀರು ಹರಿಸುವಂತೆ ಆಗ್ರಹಿಸಿ ಸಚಿವೆ ಅತಿಶಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಸಂದೇಶ ನೀಡಿರುವ ಅತಿಶಿ, ದೆಹಲಿ ಪಾಲಿನ ನೀರಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ. ಹರಿಯಾಣ ಸರ್ಕಾರ 100 ಎಂಜಿಡಿ ಕೊರತೆಯಷ್ಟು ನೀರನ್ನು ಹರಿಸುತ್ತಿರುವುದರಿಂದ ದೆಹಲಿಯ 28 ಲಕ್ಷ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹತ್ನಿಕುಂಡ್ ಬ್ಯಾರೇಜ್ ನೀರಿನಿಂದ ತುಂಬಿದೆ. ಆದರೆ, ದೆಹಲಿಗೆ ನೀರು ತಲುಪಬಾರದೆಂಬ ಉದ್ದೇಶದಿಂದ ಬ್ಯಾರೇಜ್ ನ ಎಲ್ಲ ಬಾಗಿಲುಗಳನ್ನು ಮುಚ್ಚಲಾಗಿದೆ ಎಂದು ಕೆಲವು ಪತ್ರಕರ್ತರು ಹೇಳಿರುವುದಾಗಿ ಅವರು ತಿಳಿಸಿದ್ದಾರೆ. ದೆಹಲಿ ಪಾಲಿನ ನೀರು ಪಡೆಯುವವರೆಗೂ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವುದಾಗಿ ಅವರು ಹೇಳಿದ್ದಾರೆ.
Advertisement