
ಅಮರಾವತಿ: ಅಮೆರಿಕದ ಅರ್ಕಾನ್ಸಾಸ್‌ನಲ್ಲಿ ಕಿರಾಣಿ ಅಂಗಡಿಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆಂಧ್ರಪ್ರದೇಶದ 32 ವರ್ಷದ ವ್ಯಕ್ತಿಯೂ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ದಾಸರಿ ಗೋಪಿಕೃಷ್ಣ ಎಂದು ಗುರುತಿಸಲಾಗಿದೆ. ಬಾಪಟ್ಲಾ ಜಿಲ್ಲೆಯ ಇವರು ಎಂಟು ತಿಂಗಳ ಹಿಂದೆಯಷ್ಟೇ ಅಮೆರಿಕಕ್ಕೆ ತೆರಳಿದ್ದರು ಎನ್ನಲಾಗಿದೆ.
ಅರ್ಕಾನ್ಸಾಸ್‌ನ ಸಣ್ಣ ಪಟ್ಟಣವಾದ ಫೋರ್ಡೈಸ್‌ನಲ್ಲಿರುವ ಮ್ಯಾಡ್ ಬುಚರ್ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಜೂನ್ 21 ರಂದು ಬಂದೂಕುದಾರಿಯೊಬ್ಬ ಗುಂಡು ಹಾರಿಸಿದ್ದಾನೆ. ಇದರಿಂದಾಗಿ ಬಿಲ್ಲಿಂಗ್ ಕೌಂಟರ್‌ನಲ್ಲಿದ್ದ ಗೋಪಿಕೃಷ್ಣ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಮರುದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಬಾಪಟ್ಲಾ ಜಿಲ್ಲೆಯ ಕರ್ಲಪಾಲೆಂ ಮಂಡಲದ ಯಾಜಲಿಯಲ್ಲಿರುವ ಅವರ ಕುಟುಂಬ ಸದಸ್ಯರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು.
ಗೋಪಿಕೃಷ್ಣ ಅವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಕಿರಾಣಿ ಅಂಗಡಿ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ಬಂದೂಕುಧಾರಿ ಗುಂಡು ಹಾರಿಸಿದಾಗ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಈ ಮಧ್ಯೆ ದುಷ್ಕರ್ಮಿ ಅಂಗಡಿಗೆ ನುಗ್ಗಿ, ಬಿಲ್ಲಿಂಗ್ ಕೌಂಟರ್‌ನಲ್ಲಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋಪಿ ಕೃಷ್ಣ ನೆಲದ ಮೇಲೆ ಕುಸಿದು ಬೀಳುತ್ತಿದ್ದಂತೆ, ಬಂದೂಕುಧಾರಿ ಕೌಂಟರ್ ಮೇಲಿಂದ ಹಾರಿ ಶೆಲ್ಫ್‌ನಲ್ಲಿ ಏನನ್ನೂ ತೆಗೆದುಕೊಂಡು ಪರಾರಿಯಾಗಿದ್ದಾನೆ.
Advertisement