
ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಚಂದನ್ವಾರಿ ಬಳಿ ಅಮರನಾಥ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನ್ ಅಪಘಾತಕ್ಕೀಡಾಗಿದ್ದು, ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಗಡಿ ಭದ್ರತಾ ಪಡೆ ಫೋಸ್ಟ್ ಮಾಡಿದ್ದು, ಯಾತ್ರಿಕರ ತಲೆಗೆ ಗಂಭೀರ ಗಾಯಗಳಾಗಿವೆ ಮತ್ತು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಿಎಸ್‌ಎಫ್‌ನ ತ್ವರಿತ ಸ್ಪಂದನೆ ಯಾತ್ರಿಕರ ಅಮೂಲ್ಯ ಜೀವಗಳನ್ನು ಉಳಿಸಿದೆ ಎಂದು ತಿಳಿಸಲಾಗಿದೆ.
ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆಯನ್ನು ಬಿಎಸ್‌ಎಫ್ ಉಲ್ಲೇಖಿಸದಿದ್ದರೂ, ಮಹಿಳೆ ಸೇರಿದಂತೆ ಇಬ್ಬರು ಯಾತ್ರಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲಾಗಿರುವುದನ್ನು ದೃಶ್ಯಗಳು ತೋರಿಸಿವೆ. ಅವರ ಗುರುತನ್ನು ದೃಢೀಕರಿಸಲಾಗಿಲ್ಲ.
ಇದಕ್ಕೂ ಮುನ್ನಾ ಇಂದು ಬೆಳಗ್ಗೆ ಬಿಗಿ ಭದ್ರತೆಯ ನಡುವೆ ಪಂಥಾ ಚೌಕ್ ಬೇಸ್ ಕ್ಯಾಂಪ್‌ನಿಂದ ಮತ್ತೊಂದು ಬ್ಯಾಚ್ ಯಾತ್ರಿಕರು ಅಮರನಾಥ ಯಾತ್ರೆಗೆ ಹೊರಟರು.ಕಾರುಗಳು ಪಂಥಾ ಚೌಕ್ ಬೇಸ್ ಕ್ಯಾಂಪ್‌ನ ಪೊಲೀಸ್ ಚೆಕ್‌ಪೋಸ್ಟ್‌ಗಳನ್ನು ದಾಟುವ ದೃಶ್ಯಗಳು ವಿಡಿಯೋದಲ್ಲಿದೆ.
ದೆಹಲಿಯ ಯಾತ್ರಾರ್ಥಿ ರಾಜೇಶ್ ಗುಪ್ತಾ ಮಾತನಾಡಿ, ಇದು ಬಾಬಾ ಭೋಲೆನಾಥನ ಆರಾಧನೆಗಾಗಿ ನನ್ನ ಎರಡನೇ ಯಾತ್ರೆಯಾಗಿದೆ. ಈ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ಉತ್ಸುಕವಾಗಿದೆ. ಯಾತ್ರಿಕರಿಗಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಎಲ್ಲಾ ರೀತಿಯ ಸೂಕ್ತ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.
Advertisement