
ಅಲಿಘರ್: ಗುಂಪೊಂದರಿಂದ ಹತ್ಯೆಗೀಡಾದ ಮೃತ ಮುಸ್ಲಿಂ ವ್ಯಕ್ತಿ ಸೇರಿದಂತೆ ಎಂಟು ಜನರ ವಿರುದ್ಧ ಪೊಲೀಸರು ಡಕಾಯಿತಿ ಪ್ರಕರಣವನ್ನು ದಾಖಲಿಸಿದ್ದಾರೆ. ಕಳ್ಳತನದ ಶಂಕೆ ಹಿನ್ನೆಲೆಯಲ್ಲಿ ಗುಂಪೊಂದು ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿತ್ತು.
ಹಲ್ಲೆ ಪ್ರಕರಣದ ಆರೋಪಿಯ ತಾಯಿಯ ದೂರಿನ ಮೇರೆಗೆ ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 18ರ ರಾತ್ರಿ ಮಾಮು ಭಂಜಾ ಪ್ರದೇಶದಲ್ಲಿ ಮೊಹಮ್ಮದ್ ಫರೀದ್ (35) ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ನಂತರ ಆ ಪ್ರದೇಶದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿತ್ತು. ಈ ಸಂಬಂಧ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ.
ಹಲ್ಲೆ ಪ್ರಕರಣದಲ್ಲಿ ಬಂಧಿತ ಆರು ಆರೋಪಿಗಳಲ್ಲಿ ಒಬ್ಬರಾದ ರಾಹುಲ್ ಅವರ ತಾಯಿ ಲಕ್ಷ್ಮಿ ಮಿತ್ತಲ್ ಅವರು ದೂರು ನೀಡಿದ್ದು, ಅದರ ಆಧಾರದ ಮೇಲೆ ದರೋಡೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಜೂನ್ 18ರ ರಾತ್ರಿ ಮೊಹಮ್ಮದ್ ಫರೀದ್ ಅಲಿಯಾಸ್ ಔರಂಗಜೇಬ್ ತನ್ನ ಮನೆಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ದೋಚುವ ಮೊದಲು ತನಗೆ ಕಿರುಕುಳ ನೀಡಲು ಪ್ರಯತ್ನಿಸಿದನು ಎಂದು ಮಿತ್ತಲ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಆತನ ಕುಟುಂಬ ಸದಸ್ಯರು ಫರೀದ್‌ನನ್ನು ಹಿಂಬಾಲಿಸಿದಾಗ, ಅವನು ತನ್ನ ಸಮತೋಲನವನ್ನು ಕಳೆದುಕೊಂಡು ಮೆಟ್ಟಿಲುಗಳಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದನು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಫರೀದ್ ಅಲ್ಲದೆ ಸಲ್ಮಾನ್, ಮೊಹಮ್ಮದ್ ಝಾಕಿ ಹಾಗೂ ಇತರ ಆರು ಮಂದಿಯನ್ನು ದೂರಿನಲ್ಲಿ ಹೆಸರಿಸಿದ್ದಾರೆ.
ಸದ್ಯ ಪೊಲೀಸರು ಮೃತ ಮತ್ತು ಇತರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯನ್ನು ವಿವಸ್ತ್ರಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲವನ್ನು ಬಳಸುವುದು) ಮತ್ತು 395 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸರ್ಕಲ್ ಆಫೀಸರ್ ರಾಕೇಶ್ ಕುಮಾರ್ ಸಿಸೋಡಿಯಾ ಮಾತನಾಡಿ, ಇತ್ತೀಚೆಗೆ ಬೆಳಕಿಗೆ ಬಂದಿರುವ ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಏಳು ಮಂದಿ ಹಾಗೂ ಇಬ್ಬರು ಅಪರಿಚಿತ ಆರೋಪಿಗಳ ವಿರುದ್ಧ ದರೋಡೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಎರಡು ವಾರಗಳ ಹಿಂದೆ ಮೃತನ ಕುಟುಂಬದವರು ನೀಡಿದ ದೂರಿನಲ್ಲಿ ಫರೀದ್ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಕಳ್ಳತನದ ಶಂಕೆಯಿಂದ ಸ್ಥಳೀಯರು ಕೆಲವರು ಆತನನ್ನು ಸುತ್ತುವರಿದು ಥಳಿಸಿದ್ದಾರೆ ಎಂದು ಆರೋಪಿಸಿದ್ದರು.
ಪೊಲೀಸರು ಸ್ಥಳಕ್ಕಾಗಮಿಸುವುದರೊಳಗೆ ಫರೀದ್ ಗಂಭೀರವಾಗಿ ಗಾಯಗೊಂಡು ಮಲ್ಖಾನ್ ಸಿಂಗ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಎಂ ಶೇಖರ್ ಪಾಠಕ್ ತಿಳಿಸಿದ್ದಾರೆ.
Advertisement