
ನವದೆಹಲಿ: ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯವು ಎರಡು ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್‌ಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವುಗಳಲ್ಲಿ ಬಿಳಿ ಹುಳುಗಳು ಇರುವುದನ್ನು ಪತ್ತೆಮಾಡಿದೆ. ಪರೀಕ್ಷೆ ಬಳಿಕ ಈ ಚಾಕೊಲೇಟ್‌ಗಳು ಸೇವನೆಗೆ 'ಅಸುರಕ್ಷಿತ' ಎಂದು ಪ್ರಯೋಗಾಲಯದ ವರದಿ ಹೇಳಿದೆ.
ಆರ್‌ಟಿಐ ಮತ್ತು ಸಾಮಾಜಿಕ ಕಾರ್ಯಕರ್ತರಾದ ರಾಬಿನ್ ಜಾಕಿಯಸ್ ಅವರು ಫೆಬ್ರುವರಿ 9 ರಂದು ಹೈದರಾಬಾದ್‌ನ ಅಮೀರ್‌ಪೇಟ್‌ನ ಸೂಪರ್‌ಮಾರ್ಕೆಟ್‌ನಿಂದ ಖರೀದಿಸಿದ ಚಾಕೊಲೇಟ್‌ಗಳಲ್ಲಿ ಹುಳುಗಳು ಪತ್ತೆಯಾಗಿದ್ದವು. ನಂತರ ಅವರು ಚಾಕೊಲೇಟ್‌ಗಳನ್ನು ಪರೀಕ್ಷೆಗೆ ಕಳುಹಿಸಿದ್ದರು.
ಬುಧವಾರ, ರಾಬಿನ್ ಜಾಕಿಯಸ್ ಅವರು ಟ್ವಿಟರ್‌ನಲ್ಲಿ ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯದ ವರದಿಯನ್ನು ಹಂಚಿಕೊಂಡಿದ್ದಾರೆ. ಕ್ಯಾಡ್ಬರಿಸ್ ಡೈರಿ ಮಿಲ್ಕ್ ರೋಸ್ಟೆಡ್ ಆಲ್ಮಂಡ್ ಮತ್ತು ಕ್ಯಾಡ್ಬರಿಸ್ ಡೈರಿ ಮಿಲ್ಕ್ ಫ್ರೂಟ್ ಅಂಡ್ ನಟ್ ಎಂಬ ಎರಡು ಚಾಕೊಲೇಟ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
'ಈ ಚಾಕೊಲೇಟ್‌ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಬಿಳಿ ಹುಳುಗಳು ಮತ್ತು ಗೂಡುಗಳು ಇರುವುದು ಕಂಡುಬಂದಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಸೆಕ್ಷನ್ 3 (zz) (iii) (ix) ಅಡಿಯಲ್ಲಿ ಇವುಗಳು ಸೇವನೆಗೆ ಅಸುರಕ್ಷಿತವೆಂದು ಪರಿಗಣಿಸಲಾಗಿದೆ' ಎಂದು ಪ್ರಯೋಗಾಲಯದ ವರದಿ ಹೇಳಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಟ್ಯಾಗ್ ಮಾಡಿರುವ ಜಾಕಿಯಸ್ ಅವರು, ಮಕ್ಕಳು ಹೆಚ್ಚಾಗಿ ಸೇವಿಸುವ ಅಸುರಕ್ಷಿತ ಆಹಾರವನ್ನು ಪೂರೈಸುವ ಎಫ್‌ಎಂಸಿಜಿ ಕಂಪನಿಗಳನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ದಂಡ ವಿಧಿಸಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.
'ವ್ಯವಸ್ಥೆಯನ್ನು ಅಪಹಾಸ್ಯ' ಮಾಡಲು ಕಂಪನಿಗಳಿಗೆ ಅವಕಾಶ ನೀಡಬಾರದು. ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಅವರು ಹೇಳಿದರು.
ಕಂಪನಿ ಪ್ರತಿಕ್ರಿಯೆ ನೀಡಿದ್ದಿಷ್ಟು..
ಕ್ಯಾಡ್ಬರಿ ಬ್ರ್ಯಾಂಡ್‌ನ ಮಾಲೀಕತ್ವ ಹೊಂದಿರುವ ಮೊಂಡೆಲೆಜ್ ಪ್ರತಿಕ್ರಿಯಿಸಿದ್ದು, ಈಗ ವರದಿ ಮಾಡಲಾಗಿರುವ ಸಮಸ್ಯೆಯು ಉತ್ಪನ್ನದ ಉತ್ಪಾದನಾ ಪ್ರಕ್ರಿಯೆಯಲ್ಲಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
'Mondelez ಕಂಪನಿಯು ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ HACCP (ಹಜಾರ್ಡ್ ಅನಾಲಿಸಿಸ್ ಮತ್ತು ಕ್ರಿಟಿಕಲ್ ಕಂಟ್ರೋಲ್ ಪಾಯಿಂಟ್ಸ್) ಕಾರ್ಯಕ್ರಮವನ್ನು ಅನುಸರಿಸುತ್ತದೆ. ಇದು ವಿಶ್ವದ ಅತ್ಯಂತ ಸಮಗ್ರ ಆಹಾರ ಸುರಕ್ಷತಾ ವ್ಯವಸ್ಥೆಯಾಗಿದೆ. ನಮ್ಮ ಉತ್ಪನ್ನಗಳು ಯಾವುದೇ ಭೌತಿಕ, ರಾಸಾಯನಿಕ ಮತ್ತು ಸೂಕ್ಷ್ಮ ಜೀವವಿಜ್ಞಾನದ ಸಮಸ್ಯೆಗಳಿಂದ ಮುಕ್ತವಾಗಿವೆ' ಎಂದು ಟ್ವೀಟ್ ಮಾಡಿದೆ.
'ಇತರ ಆಹಾರ ಉತ್ಪನ್ನಗಳಂತೆಯೇ ಚಾಕೊಲೇಟ್‌ಗಳಿಗೂ ಕೂಡ ವಿತರಣಾ ಸರಪಳಿ, ಚಿಲ್ಲರೆ ಮಾರಾಟ ಪರಿಸರ ಮತ್ತು ಸಂಗ್ರಹಣೆಯಲ್ಲಿ ನಿರ್ದಿಷ್ಟ ಕಾಳಜಿ ಮತ್ತು ಗಮನ ವಹಿಸುವ ಅಗತ್ಯವಿದೆ. ನಾವು ಅದೇ ಬ್ಯಾಚ್‌ನ ಮಾದರಿಗಳನ್ನು ಮತ್ತು ಅದೇ ಸಮಯದಲ್ಲಿ ತಯಾರಿಸಲಾದ ಇತರ ಬ್ಯಾಚ್‌ಗಳ ಉತ್ಪನ್ನಗಳನ್ನು ಪರೀಕ್ಷಿಸಿದ್ದೇವೆ ಮತ್ತು ಯಾವುದೇ ಸಮಸ್ಯೆ ಕಂಡುಬಂದಿಲ್ಲ' ಎಂದು ತಿಳಿಸಿದೆ.
Advertisement