ಕೇಂದ್ರದೊಂದಿಗಿನ ಮಾತುಕತೆ ವಿಫಲ; ಆರು ರೈತರ ಸಾವಿನ ನಡುವೆಯೂ ಮುಂದುವರಿದ ರೈತರ ಪ್ರತಿಭಟನೆ
ನವದೆಹಲಿ: ಒಂದು ತಿಂಗಳ ಹಿಂದೆ 'ದೆಹಲಿ ಚಲೋ' ಮೆರವಣಿಗೆ ಆರಂಭಿಸಿದ ನಂತರ ಆರು ರೈತರು ಸಾವಿಗೀಡಾಗಿದ್ದಾರೆ. 100ಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದಾರೆ, ಕೆಲವರು ದೃಷ್ಟಿ ಕಳೆದುಕೊಂಡಿದ್ದಾರೆ. ಆದರೆ, ಕೇಂದ್ರದೊಂದಿಗಿನ ಒಪ್ಪಂದ ಮುರಿದುಬಿದ್ದ ನಂತರವೂ ರೈತರ ಪ್ರತಿಭಟನೆ ಮುಂದುವರಿದಿದೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.
ಮಾರ್ಚ್ 2, 2024 ರಂದು ರೈತರ ಪ್ರತಿಭಟನೆಯು 20ನೇ ದಿನಕ್ಕೆ ಕಾಲಿಟ್ಟಿದೆ. ಹಲವು ಅಡೆತಡೆಗಳ ನಡುವೆಯೂ ರೈತರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಪ್ರಾಣ ಕಳೆದುಕೊಂಡ ಪ್ರತಿಭಟನಾನಿರತ ರೈತರನ್ನು ಕರ್ನೈಲ್ ಸಿಂಗ್ (62), ಜ್ಞಾನ್ ಸಿಂಗ್ (63), ಮಂಜಿತ್ ಸಿಂಗ್ (72), ನರಿಂದರ್‌ಪಾಲ್ ಸಿಂಗ್ (43), ಶುಭಕರನ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ (23) ಎಂದು ಗುರುತಿಸಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಬ್ಯಾನರ್ ಅಡಿಯಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಸಾಲ ಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರವನ್ನು ಒತ್ತಾಯಿಸಲು ರೈತರು ತಮ್ಮ ಟ್ರ್ಯಾಕ್ಟರ್-ಟ್ರಾಲಿಗಳು, ಮಿನಿ-ವ್ಯಾನ್ ಮತ್ತು ಪಿಕಪ್ ಟ್ರಕ್‌ಗಳೊಂದಿಗೆ ಫೆಬ್ರುವರಿ 13 ರಿಂದ ಗಡಿ ಭಾಗಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ