ತಾಯಿ ಸತ್ತಾಗ ತಲೆ ಬೋಳಿಸಿಕೊಳ್ಳದ ಪ್ರಧಾನಿ ಮೋದಿ ನಿಜವಾದ ಹಿಂದೂ ಅಲ್ಲ- ಲಾಲು ಪ್ರಸಾದ್ ಯಾದವ್
ಪಾಟ್ನಾ: ತಾಯಿ ಸತ್ತಾಗ ಯಾವುದೇ ನೋವಿಲ್ಲದೆ ತಲೆ ಬೋಳಿಸಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ನಿಜವಾದ ಹಿಂದೂ ಅಲ್ಲ ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಟೀಕಿಸಿದ್ದಾರೆ. ಹಿಂದೂ ಸಂಪ್ರದಾಯಗಳ ಪ್ರಕಾರ, ಪೋಷಕರು ಸತ್ತಾಗ ಪುರುಷರು ತಲೆ ಬೋಳಿಸಿಕೊಳ್ಳಬೇಕು. ಆದರೆ, 2022 ರ ಡಿಸೆಂಬರ್‌ನಲ್ಲಿ ತಾಯಿ ಹೀರಾಬಾ ನಿಧನರಾದಾಗ ಮೋದಿ ಏಕೆ ತಲೆ ಬೋಳಿಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಗಾಂಧಿ ಮೈದಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಲವು ಪ್ರತಿಪಕ್ಷಗಳ ನಾಯಕರು ಭಾಗವಹಿಸಿದ್ದ 'ಜನ ವಿಶ್ವಾಸ ಮಹಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಅವರ ಕುಟುಂಬ ರಾಜಕಾರಣ ಹೇಳಿಕೆ ಕುರಿತು ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿಗೆ ಕುಟುಂಬವಿಲ್ಲದ ಕಾರಣ ಕುಟುಂಬ ರಾಜಕಾರಣ ಬಗ್ಗೆ ದಾಳಿ ಮಾಡುತ್ತಿದ್ದಾರೆ. ಇದರಿಂದ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಅವಮಾನಕ್ಕೆ ಒಳಗಾಗುತ್ತಾರೆ" ಎಂದು ಹೇಳಿದರು.
ತಮ್ಮ ಪುತ್ರಿ ರೋಹಿಣಿ ಕಿಡ್ನಿ ದಾನ ಮಾಡಿದ್ದಕ್ಕಾಗಿ ಪ್ರಶಂಸಿಸಿದ ಲಾಲು ಪ್ರಸಾದ್ ಯಾದವ್, ಅನೇಕ ಕಾಯಿಲೆಗಳ ಹೊರತಾಗಿಯೂ, ಜನರಿಗಾಗಿ ಅವರ ಕೆಲಸ ಮುಂದುವರೆದಿದೆ ಎಂದು ಪ್ರತಿಪಾದಿಸಿದರು.ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಮನವಿ ಮಾಡಿದರು. ಮತ್ತೊಂದೆಡೆ ಪ್ರಧಾನಿ ಮೋದಿ ಕುರಿತ ಲಾಲು ಪ್ರಸಾದ್ ಯಾದವ್ ಅವರ ಹೇಳಿಕೆ ವಿರುದ್ಧ ಬಿಜೆಪಿ ಕಿಡಿಕಾರಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ