ಶ್ರೀನಗರ: ಗುರುವಾರ ಇಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಹೊಸದೇನೂ ಇರಲಿಲ್ಲ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಭರವಸೆ ಹುಸಿಯಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಶುಕ್ರವಾರ ಹೇಳಿದ್ದಾರೆ.
ಪಕ್ಷದ ಕಾರ್ಯಕ್ರಮವೊಂದರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮಾತಿನಲ್ಲಿ ಹೊಸದೇನೂ ಕಾಣಲಿಲ್ಲ. ಅವರು ಯಾವಾಗಲೂ ಮಾತನಾಡುವ ಅದೇ ವಿಷಯಗಳ ಬಗ್ಗೆ ಮಾತನಾಡಿದರು. ಪ್ರಜಾಪ್ರಭುತ್ವದ ಮರುಸ್ಥಾಪನೆಯ ಬಗ್ಗೆ ಜನರು ಕೇಳಲು ಬಯಸಿದ್ದ ಯಾವುದನ್ನೂ ಅವರು ಉಲ್ಲೇಖಿಸಲಿಲ್ಲ ಎಂದು ತಿಳಿಸಿದರು.
ಪ್ರಧಾನಿಯೇ ಚುನಾವಣೆಯನ್ನು ಘೋಷಿಸಲಾಗದಿದ್ದರೂ, ಸುಪ್ರೀಂ ಕೋರ್ಟ್ ನೀಡಿರುವ ಸೆಪ್ಟೆಂಬರ್ 31ರ ಗಡುವಿನ ಮೊದಲು ವಿಧಾನಸಭಾ ಚುನಾವಣೆಯನ್ನು ನಡೆಸುವ ಬಗ್ಗೆ ಪ್ರಧಾನಿ ಮೋದಿ ಏನಾದರೂ ಹೇಳಬೇಕಾಗಿತ್ತು ಎಂದರು.
ಅವರು ಅದಕ್ಕೂ ಮೊದಲು (ಗಡುವು) ಚುನಾವಣೆ ನಡೆಯಲಿದೆ ಎಂದು ಹೇಳಬೇಕಿತ್ತು. ಪೂರ್ಣ ರಾಜ್ಯತ್ವ ಮರುಸ್ಥಾಪನೆಯ ಬಗ್ಗೆ ಏನಾದರೂ ಹೇಳಬೇಕಾಗಿತ್ತು, ನಿರುದ್ಯೋಗಿ ಯುವಕರಿಗೆ ಉದ್ಯೋಗ ಪ್ಯಾಕೇಜ್ ಘೋಷಿಸಬೇಕು, ದಿನಗೂಲಿ ಕಾರ್ಮಿಕರನ್ನು ಕಾಯಂಗೊಳಿಸುವ ಬಗ್ಗೆ ಏನಾದರೂ ಹೇಳಬೇಕಿತ್ತು ಮತ್ತು ವಿದ್ಯುತ್ ಬಿಕ್ಕಟ್ಟಿನ ಕುರಿತು ಮಾತನಾಡಬೇಕಿತ್ತು. ಇವುಗಳ ಬಗ್ಗೆ ಮೋದಿ ಮಾತನಾಡುತ್ತಾರೆ ಎಂದು ನಾವು ಆಶಿಸಿದ್ದೆವು, ಆದರೆ ನಮ್ಮ ಭರವಸೆ ಹುಸಿಯಾಗಿದೆ ಎಂದು ಹೇಳಿದರು.
Advertisement