
ಚಂಡೀಗಢ: ಲೋಕಸಭೆ ಚುನಾವಣೆಗೆ ಮುನ್ನ, ಹರಿಯಾಣ ಹಿಸ್ಸಾರ್‌ನ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.
ರಾಜೀನಾಮೆ ನೀಡಿರುವ ಕುರಿತು ಟ್ವೀಟ್ ಮಾಡಿದ ನಂತರ, ಬಿಜೆಪಿ ನಾಯಕ ಬಿರೇಂದರ್ ಸಿಂಗ್ ಅವರ ಪುತ್ರ ಬ್ರಿಜೇಂದ್ರ ಸಿಂಗ್ ಅವರು ನವದೆಹಲಿಯಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿ ವಿರೋಧ ಪಕ್ಷಕ್ಕೆ ಸೇರಿದರು.
'ಬಲವಾದ ರಾಜಕೀಯ ಕಾರಣಗಳಿಂದ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಹಿಸ್ಸಾರ್‌ನ ಸಂಸತ್ ಸದಸ್ಯನಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಪಕ್ಷಕ್ಕೆ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಬ್ರಿಜೇಂದ್ರ ಸಿಂಗ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬ್ರಿಜೇಂದ್ರ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಅಜಯ್ ಮಾಕನ್, ಮುಕುಲ್ ವಾಸ್ನಿಕ್ ಮತ್ತು ದೀಪಕ್ ಬಬಾರಿಯಾ ಕೂಡ ಖರ್ಗೆ ಅವರ ನಿವಾಸದಲ್ಲಿ ಉಪಸ್ಥಿತರಿದ್ದರು.
ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ಬ್ರಿಜೇಂದ್ರ ಸಿಂಗ್ ಅವರನ್ನು ಪಕ್ಷವು ಹಿಸ್ಸಾರ್‌ನಿಂದಲೇ ಅಭ್ಯರ್ಥಿಯನ್ನಾಗಿ ಮಾಡಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೇಂದ್ರ ಸಿಂಗ್ ಅವರು ಜೆಜೆಪಿಯ ದುಷ್ಯಂತ್ ಚೌಟಾಲಾ ಮತ್ತು ಆಗ ಕಾಂಗ್ರೆಸ್‌ನಲ್ಲಿದ್ದ ಭವ್ಯಾ ಬಿಷ್ಣೋಯ್ ಅವರನ್ನು ಸೋಲಿಸಿ ಹಿಸ್ಸಾರ್ ಲೋಕಸಭಾ ಸ್ಥಾನವನ್ನು ಗೆದ್ದಿದ್ದರು.
ಬ್ರಿಜೇಂದ್ರ ಸಿಂಗ್ ಅವರು ಪ್ರಮುಖ ಜಾಟ್ ನಾಯಕರಾದ ಸರ್ ಛೋಟು ರಾಮ್ ಅವರ ಮೊಮ್ಮಗನಾಗಿದ್ದಾರೆ.
Advertisement