
ಭೋಪಾಲ್: ಪ್ರಾಣಿ ಪ್ರಿಯರಿಗೆ ಸಿಹಿ ಸುದ್ದಿಯೊಂದು ಇದ್ದು, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಗಾಮಿನಿ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ.
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಗಾಮಿನಿ ಚೀತಾ ಭಾನುವಾರ ಐದು ಮರಿಗಳಿಗೆ ಜನ್ಮ ನೀಡಿದ್ದು, ದೇಶದ ಒಟ್ಟು ಚೀತಾಗಳ ಸಂಖ್ಯೆ ಇದೀಗ 26 ಕ್ಕೆ ಏರಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್, "ಹೈ ಫೈವ್, ಕುನೋ! ದಕ್ಷಿಣ ಆಫ್ರಿಕಾದ ತ್ಸ್ವಾಲು ಕಲಹರಿ ರಿಸರ್ವ್‌ನಿಂದ ತರಲಾದ ಸುಮಾರು 5 ವರ್ಷ ವಯಸ್ಸಿನ ಹೆಣ್ಣು ಚಿರತೆ ಗಾಮಿನಿ ಇಂದು 5 ಮರಿಗಳಿಗೆ ಜನ್ಮ ನೀಡಿದೆ. ಭಾರತದಲ್ಲಿ ಜನಿಸಿದ ಚೀತಾ ಮರಿಗಳ ಸಂಖ್ಯೆ ಈಗ 13ಕ್ಕೆ ಏರಿಕೆಯಾಗಿದೆ ಎಂದು ಸಚಿವರು ಹೇಳಿದರು.
ಅಲ್ಲದೆ ಇದು ಭಾರತದ ನೆಲದಲ್ಲಿ ಮರಿಗಳಿಗೆ ಜನ್ಮ ನೀಡಿದ ನಾಲ್ಕನೇ ಚೀತಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾಗಳ ಪೈಕಿ ಮರಿಗಳಿಗೆ ಜನ್ಮ ನೀಡಿದ ಮೊದಲ ಚೀತಾ ಆಗಿದೆ.
"ವಿಶೇಷವಾಗಿ ಅರಣ್ಯಾಧಿಕಾರಿಗಳು, ಪಶುವೈದ್ಯರು ಮತ್ತು ಕ್ಷೇತ್ರ ಸಿಬ್ಬಂದಿಗಳ ತಂಡವು ಚಿರತೆಗಳಿಗೆ ಒತ್ತಡ ರಹಿತ ವಾತಾವರಣವನ್ನು ಖಾತ್ರಿಪಡಿಸಿದವರಿಗೆ ಅಭಿನಂದನೆಗಳು, ಇದು ಯಶಸ್ವಿ ಸಂಯೋಗ ಮತ್ತು ಮರಿಗಳ ಜನನಕ್ಕೆ ಕಾರಣವಾಯಿತು. ಕುನೋದಲ್ಲಿ ಮರಿಗಳೂ ಸೇರಿದಂತೆ ಒಟ್ಟು ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಗಾಮಿನಿಯ ಪರಂಪರೆಯು ಮುಂದೆ ಸಾಗುತ್ತಿದೆ: ತನ್ನ ಮುದ್ದಾಗಿರುವ ಮರಿಗಳನ್ನು ಪರಿಚಯಿಸುತ್ತಿದೆ ಎಂದು ಕೇಂದ್ರ ಸಚಿವರು ಟ್ವೀಟ್ ಮಾಡಿದ್ದಾರೆ.
ಮಹತ್ವಾಕಾಂಕ್ಷೆಯ ಚೀತಾ ಮರುಪರಿಚಯ ಯೋಜನೆಯಡಿ, ಐದು ಹೆಣ್ಣು ಮತ್ತು ಮೂರು ಗಂಡುಗಳನ್ನು ಒಳಗೊಂಡ ಎಂಟು ನಮೀಬಿಯಾದ ಚೀತಾಗಳನ್ನು 2022 ರ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದ ಆವರಣಕ್ಕೆ ಬಿಡುಗಡೆ ಮಾಡಲಾಯಿತು. ಫೆಬ್ರವರಿ 2023 ರಲ್ಲಿ, ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ಉದ್ಯಾನವನಕ್ಕೆ ತರಲಾಯಿತು. ಗಾಮಿನಿ ದಕ್ಷಿಣ ಆಫ್ರಿಕಾದಿಂದ ತಂದ ಗುಂಪಿನ ಭಾಗವಾಗಿದೆ.
Advertisement