ಹರ್ಯಾಣ ನೂತನ ಸಿಎಂ ನಯಾಬ್ ಸೈನಿ: ಇಂದು ಸಂಜೆ ಪ್ರಮಾಣ ವಚನ ಸಾಧ್ಯತೆ

ಹರ್ಯಾಣ ರಾಜ್ಯದಲ್ಲಿ ನಡೆದ ಡಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕುರುಕ್ಷೇತ್ರ ಸಂಸದ ನಯಾಬ್ ಸಿಂಗ್ ಸೈನಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ.
ನಯಾಬ್ ಸೈನಿ
ನಯಾಬ್ ಸೈನಿ
Updated on

ಚಂಡೀಗಢ: ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕುರುಕ್ಷೇತ್ರ ಸಂಸದ ನಯಾಬ್ ಸಿಂಗ್ ಸೈನಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಅವರ ಸಂಪುಟದ ಸಚಿವರು ಇಂದು ಬೆಳಗ್ಗೆ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ರಾಜೀನಾಮೆ ಸಲ್ಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಸೈನಿ ಅವರು ನರೇಂಗರ್ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಹರಿಯಾಣ ವಿಧಾನಸಭೆಗೆ ಹಲವು ಬಾರಿ ಆಯ್ಕೆಯಾಗಿದ್ದಾರೆ.

ಖಟ್ಟರ್ ನೇತೃತ್ವದ ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕುತ್ತಿರುವ ತನ್ನ ಮೈತ್ರಿ ಪಾಲುದಾರ ಜನನಾಯಕ ಜನತಾ ಪಕ್ಷವನ್ನು (JJP) ಎದುರಿಸುವ ಬಿಜೆಪಿ ಕ್ರಮ ಇದಾಗಿದೆ ಎಂದು ವಿಶ್ಲೇಷಿಸಲಾಗಿದೆ.

2019 ರ ಹರಿಯಾಣ ವಿಧಾನಸಭೆ ಚುನಾವಣೆಯ ನಂತರ ಜೆಜೆಪಿ ಜೊತೆ ಸೇರಿ ಬಿಜೆಪಿ ಸರ್ಕಾರವನ್ನು ರಚಿಸಿತು, ಬಿಜೆಪಿ 90 ರಲ್ಲಿ 40 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಹುಮತದ 6 ಸ್ಥಾನಗಳ ಕೊರತೆಯನ್ನು ಎದುರಿಸಿತು. ತರುವಾಯ, ಬಿಜೆಪಿಯು 10 ಸ್ಥಾನಗಳನ್ನು ಗೆದ್ದಿದ್ದ ಜನನಾಯಕ ಜನತಾ ಪಕ್ಷದೊಂದಿಗೆ ಸೇರಿ ಮೈತ್ರಿ ಸರ್ಕಾರ ರಚಿಸಿತು.

ಒಪ್ಪಂದದ ಭಾಗವಾಗಿ ಜೆಜೆಪಿಯ ದುಷ್ಯಂತ್ ಚೌತಾಲಾ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡು ಸಿಎಂ ಸ್ಥಾನಕ್ಕೆ ಖಟ್ಟರ್ ಮತ್ತು ಅವರ ಇಡೀ ಸಂಪುಟ ಇಂದು ಮುಂಜಾನೆ ರಾಜೀನಾಮೆ ನೀಡಿದೆ.

ನಯಾಬ್ ಸೈನಿ
ಹರಿಯಾಣ ಸಿಎಂ ಸ್ಥಾನಕ್ಕೆ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ

ಕೇಂದ್ರ ಸಚಿವ ಅರ್ಜುನ್ ಮುಂಡಾ ಮತ್ತು ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರು ಬದಲಾವಣೆಗಳ ಮೇಲ್ವಿಚಾರಣೆಗೆ ರಾಜ್ಯದಲ್ಲಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷವು ಇಂದು ಸಂಜೆ ಸಭೆ ಸೇರಲಿದೆ.

ಇಂದು ಸಂಜೆ ಪ್ರಮಾಣ ವಚನ?: ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲು ವಿಫಲವಾದ ನಂತರ ಬಿಜೆಪಿ ಮತ್ತು ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ನೇತೃತ್ವದ ಜನನಾಯಕ ಜನತಾ ಪಕ್ಷ (ಜೆಜೆಪಿ) ನಡುವಿನ ಸಂಬಂಧ ಹದಗೆಟ್ಟಿದೆ. ನೂತನ ಸಿಎಂ ಮತ್ತು ಅವರ ಸಂಪುಟ ಸಚಿವರು ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಒಡೆದ ಜೆಜೆಪಿ ಬಣದ ಸದಸ್ಯರು ಮತ್ತು ಸ್ವತಂತ್ರ ಶಾಸಕರು ಬಿಜೆಪಿ ಜೊತೆ ಸೇರ್ಪಡೆಗೊಳ್ಳಬಹುದು.

ಬಿಜೆಪಿ ಏಕಾಂಗಿ ಸ್ಪರ್ಧೆ?: 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲಾ 10 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯುವ ಒಲವು ಹೊಂದಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಹರ್ಯಾಣ ಸರ್ಕಾರ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ನಿಯಮಗಳ ಪ್ರಕಾರ ಮುಂದಿನ ಅವಿಶ್ವಾಸ ನಿರ್ಣಯ ಮಂಡನೆಗೆ ಆರು ತಿಂಗಳ ಕಾಲಾವಕಾಶವಿದೆ.

ಸ್ವತಂತ್ರ ಶಾಸಕರು ಬಿಜೆಪಿ ನೇತೃತ್ವದ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಸ್ವತಂತ್ರ ಶಾಸಕ ಧರಂಪಾಲ್ ಗೊಂಡರ್ ಹೇಳಿದ್ದಾರೆ. ಕೆಲವು ಸಮಯದ ಹಿಂದೆ, ಖಟ್ಟರ್ ಅವರು ಸ್ವತಂತ್ರ ಶಾಸಕರೊಂದಿಗೆ ಸಭೆ ನಡೆಸಿ ಅವರು ಯಾವ ಕಡೆಗೆ ಒಲವು ತೋರುತ್ತಿದ್ದಾರೆಂದು ಲೆಕ್ಕಾಚಾರ ಮಾಡಿದ್ದರು.

ಪ್ರಸ್ತುತ, 90 ಸದಸ್ಯರ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿ 41 ಶಾಸಕರನ್ನು ಹೊಂದಿದ್ದರೆ, ಜೆಜೆಪಿ 10 ಶಾಸಕರನ್ನು ಹೊಂದಿದೆ. ಆಡಳಿತಾರೂಢ ಒಕ್ಕೂಟವು ಏಳು ಸ್ವತಂತ್ರರ ಪೈಕಿ ಆರು ಮಂದಿಯ ಬೆಂಬಲವನ್ನು ಸಹ ಹೊಂದಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ 30 ಶಾಸಕರನ್ನು ಹೊಂದಿದೆ. ಇಂಡಿಯನ್ ನ್ಯಾಷನಲ್ ಲೋಕ ದಳ ಮತ್ತು ಹರಿಯಾಣ ಲೋಕಿತ್ ಪಕ್ಷ ತಲಾ ಒಂದು ಸ್ಥಾನವನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com