ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಆದೇಶ: ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಕಾಂಗ್ರೆಸ್ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಮೂಲ ತೆರಿಗೆ ಬೇಡಿಕೆ 102 ಕೋಟಿ ಇದ್ದು, ಬಡ್ಡಿ ಸೇರಿ 135.06 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಈಗ 65. 94 ಕೋಟಿ ರೂಪಾಯಿ ವಸೂಲಿಯಾಗಿದೆ ಎಂದರು.
ರಾಹುಲ್ ಗಾಂಧಿ-ಪ್ರಿಯಾಂಕಾ ಗಾಂಧಿ(ಸಂಗ್ರಹ ಚಿತ್ರ)
ರಾಹುಲ್ ಗಾಂಧಿ-ಪ್ರಿಯಾಂಕಾ ಗಾಂಧಿ(ಸಂಗ್ರಹ ಚಿತ್ರ)

ನವದೆಹಲಿ: 100 ಕೋಟಿ ರೂಪಾಯಿಗೂ ಹೆಚ್ಚು ಬಾಕಿ ತೆರಿಗೆ ವಸೂಲಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸ್‌ಗೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ITAT)ಆದೇಶವನ್ನು ದೆಹಲಿ ಹೈಕೋರ್ಟ್ ಬುಧವಾರ ಎತ್ತಿ ಹಿಡಿದಿದೆ.

ಐಟಿಎಟಿಯ ಮಾರ್ಚ್ 8ರ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೇಂದ್ರ ಕುಮಾರ್ ಕೌರವ್ ಅವರ ಪೀಠ ಹೇಳಿದೆ.

ಕಾಂಗ್ರೆಸ್ ಮತ್ತು ಐಟಿ ಇಲಾಖೆ ಪರವಾಗಿ ಸಲ್ಲಿಸಿದ ಅರ್ಜಿಗಳನ್ನು ಆಲಿಸಿದ ನ್ಯಾಯಪೀಠ ಮಂಗಳವಾರ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ತನ್ನ ವಿರುದ್ಧ ಬಾಕಿ ತೆರಿಗೆ ವಸೂಲಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಐಟಿ ಇಲಾಖೆಯ ಫೆಬ್ರವರಿ 13 ರ ನೋಟಿಸ್‌ಗೆ ತಡೆಯಾಜ್ಞೆ ಕೋರಿ ಕಾಂಗ್ರೆಸ್ ಪಕ್ಷದ ಅರ್ಜಿಯನ್ನು ಐಟಿಎಟಿ ವಜಾಗೊಳಿಸಿದ ನಂತರ ಪಕ್ಷ ಹೈಕೋರ್ಟ್‌ಗೆ ಮೊರೆ ಹೋಗಿದೆ.

2018-19ರ ಮೌಲ್ಯಮಾಪನ ವರ್ಷದಲ್ಲಿ 199 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಅಂದಾಜಿಸಿದಾಗ ಮೌಲ್ಯಮಾಪನ ಅಧಿಕಾರಿಯು 100 ಕೋಟಿ ರೂಗಿಂತ ಹೆಚ್ಚಿನ ತೆರಿಗೆ ಬೇಡಿಕೆಯನ್ನು ಎತ್ತಿದ್ದರು. ಈ ಸಂದರ್ಭದಲ್ಲಿ ಇಷ್ಟೊಂದು ಮೊತ್ತದ ಬಾಕಿ ತೆರಿಗೆ ವಸೂಲಿಯಿಂದ ರಕ್ಷಣೆ ನೀಡಿ ಇಲ್ಲದಿದ್ದರೆ ಪಕ್ಷ ಪತನಗೊಳ್ಳುತ್ತದೆ ಎಂದು ಕಾಂಗ್ರೆಸ್ ಪರ ವಕೀಲರು ವಾದಿಸಿದ್ದರು.

ಮೂಲ ತೆರಿಗೆ ಬೇಡಿಕೆ 102 ಕೋಟಿ ಇದ್ದು, ಬಡ್ಡಿ ಸೇರಿ 135.06 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಈಗ 65. 94 ಕೋಟಿ ರೂಪಾಯಿ ವಸೂಲಿಯಾಗಿದೆ ಎಂದರು.

ನ್ಯಾಯಮಂಡಳಿ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿ, ಫೆಬ್ರವರಿ 13, 2024 ರಂದು ಮೌಲ್ಯಮಾಪನ ಅಧಿಕಾರಿ ನೀಡಿದ ಕಾಯಿದೆಯ ಸೆಕ್ಷನ್ 226 (3) ರ ಅಡಿಯಲ್ಲಿ ವಸೂಲಾತಿ ನೊಟೀಸ್ ನಲ್ಲಿ ಪ್ರಾಮಾಣಿಕತೆ ಕೊರತೆಯಿದೆ ಎಂದು ನಮಗೆ ಕಂಡುಬಂದಿಲ್ಲ, ಆದ್ದರಿಂದ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ.

ಆದಾಯ ತೆರಿಗೆ ನ್ಯಾಯಮಂಡಳಿ ಪಕ್ಷದ ಹಣವನ್ನು ಸ್ಥಗಿತಗೊಳಿಸಿದ ಆದೇಶವು ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಬಂದಿರುವುದರಿಂದ ಇದು "ಪ್ರಜಾಪ್ರಭುತ್ವದ ಮೇಲಿನ ದಾಳಿ" ಎಂದು ಕಾಂಗ್ರೆಸ್ ಪಕ್ಷ ಈ ಹಿಂದೆ ಟೀಕಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com