ರಾಮೇಶ್ವರಂ ಕೆಫೆ ಸ್ಫೋಟಕ್ಕೂ ತಮಿಳುನಾಡಿಗೂ ನಂಟು ಹೇಳಿಕೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕೇಸ್ ದಾಖಲು

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಆರೋಪಿ ತಮಿಳುನಾಡಿನವನು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮಧುರೈ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಮಧುರೈ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಆರೋಪಿ ತಮಿಳುನಾಡಿನವನು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮಧುರೈ ನಗರ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಶೋಭಾ ಕರಂದ್ಲಾಜೆ ಅವರ ಹೇಳಿಕೆಯನ್ನು ಖಂಡಿಸಿ 'ಎಕ್ಸ್' ನಲ್ಲಿ ಪೋಸ್ಟ್ ಹಾಕಿದ್ದರು. ಅಲ್ಲದೆ ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕತೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ ನೀಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.

ದ್ವೇಷದ ಭಾಷಣವನ್ನು ಗಮನಿಸಬೇಕು ಮತ್ತು ತಕ್ಷಣವೇ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ತಮಿಳುನಾಡು ಸಿಎಂ ಒತ್ತಾಯಿಸಿದ್ದರು. ತಮ್ಮ ಪಕ್ಷದ ಪ್ರತಿಯೊಬ್ಬರೂ ಕೊಳಕು ಮತ್ತು ವಿಭಜಕ ರಾಜಕೀಯದಲ್ಲಿ ತೊಡಗುವುದನ್ನು ನಿಲ್ಲಿಸಬೇಕೆಂದು ಪ್ರಧಾನಿ ಮೋದಿಯವರಿಗೆ ಸ್ಟಾಲಿನ್ ಆಗ್ರಹಿಸಿದ್ದರು.

ಶೋಭಾ ಕರಂದ್ಲಾಜೆ
ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿ ತಮಿಳುನಾಡಿನವ: ಶೋಭಾ ಕರಂದ್ಲಾಜೆ ವಿರುದ್ಧ ದೂರು ದಾಖಲಿಸಿದ ಡಿಎಂಕೆ

ಈ ಸಂಬಂಧ ಮಧುರೈನ ಕಡಚನೆಂತಲ್‌ನ ಸಿ ತ್ಯಾಗರಾಜನ್ ಅವರು, ಕೇಂದ್ರ ಸಚಿವೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣವನ್ನು ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿರುವ ಸಮಯದಲ್ಲಿ ಶೋಭಾ ಅವರ ಹೇಳಿಕೆಯು ತಮಿಳು ಮತ್ತು ಕನ್ನಡಿಗರ ನಡುವೆ ದ್ವೇಷ ಮತ್ತು ಅಸಮಾಧಾನ ಉಂಟುಮಾಡುತ್ತದೆ ಎಂದು ದೂರುದಾರರು ಟೀಕಿಸಿದ್ದಾರೆ.

ಬಿಜೆಪಿ ನಾಯಕರ ಹೇಳಿಕೆಯು ತಮಿಳು ಜನರನ್ನು ಭಯೋತ್ಪಾದಕರು ಎಂದು ಗುರುತಿಸಿದೆ ಮತ್ತು ಇದು ಉಭಯ ರಾಜ್ಯಗಳ ಸಂಬಂಧವನ್ನು ಹಾಳುಮಾಡುತ್ತದೆ ಮತ್ತು ಎರಡೂ ರಾಜ್ಯಗಳ ಜನರ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ ಎಂದು ದೂರುದಾರರು ಆರೋಪಿಸಿದ್ದಾರೆ.

ದೂರಿನ ಆಧಾರದ ಮೇಲೆ ಮಧುರೈ ನಗರದ ಸೈಬರ್ ಕ್ರೈಂ ಠಾಣೆ ಪೊಲೀಸರು, ಕೇಂದ್ರ ಸಚಿವೆ ವಿರುದ್ಧ ಐಪಿಸಿ ಸೆಕ್ಷನ್ 153, 153 ಎ, 505 (1) (ಬಿ) ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com