

ನವದೆಹಲಿ: ಜೈಲಿನೊಳಗಿರಲಿ ಅಥವಾ ಜೈಲಿನ ಹೊರಗಿರಲಿ ನನ್ನ ಜೀವನ ದೇಶಕ್ಕೆ ಮುಡಿಪು ಆಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರನ್ನು ಇಲ್ಲಿನ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 10 ದಿನಗಳ ಕಸ್ಟಡಿಗೆ ಕೋರಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿರುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, "ನಾನು ಜೈಲಿನ ಒಳಗೆ ಅಥವಾ ಹೊರಗೆ ಇದ್ದರೂ ನನ್ನ ಜೀವನ ರಾಷ್ಟ್ರ ಸೇವೆಗೆ ಮುಡಿಪಾಗಿದೆ ಎಂದರು. ಗುರುವಾರ ರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿದ ನಂತರ ಮೊದಲ ಬಾರಿಗೆ ಕೇಜ್ರಿವಾಲ್ ಪ್ರತಿಕ್ರಿಯಿಸಿದರು.
ಇದು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಡೆಯುವ "ರಾಜಕೀಯ ಪಿತೂರಿ" ಎಂದು ಎಎಪಿ ಹೇಳಿದೆ. ಕೇಜ್ರಿವಾಲ್ ಬಂಧನದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಪಕ್ಷ ಕರೆ ನೀಡಿದೆ.
ದೆಹಲಿ ಕ್ಯಾಬಿನೆಟ್ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್, ಪೂರ್ವ ದೆಹಲಿಯ ಲೋಕಸಭಾ ಅಭ್ಯರ್ಥಿ ಕುಲದೀಪ್ ಕುಮಾರ್ ಸೇರಿದಂತೆ ಪಕ್ಷದ ಹಲವಾರು ನಾಯಕರನ್ನು ಐಟಿಒದಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಬಂಧಿಸಲಾಯಿತು.
Advertisement