ನವದೆಹಲಿ: ಕಾಂಬೋಡಿಯಾದಲ್ಲಿ ಉದ್ಯೋಗದ ಆಮಿಷ ಒಡ್ಡಿ ಸೈಬರ್ ಕ್ರೈಂಗೆ ಬಳಕೆ ಮಾಡಿಕೊಳ್ಳುತ್ತಿದ್ದ 250 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಉದ್ಯಾಗಾವಕಾಶಗಳ ಆಮಿಷಕ್ಕೆ ಒಳಗಾಗಿ ಕಾಂಬೋಡಿಯಾದಲ್ಲಿ ದುಷ್ಕತ್ಯಗಳಿಗೆ ದುರ್ಬಳಕೆಯಾಗುತ್ತಿದ್ದ 250 ಭಾರತೀಯ ಪ್ರಜೆಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ (MEA) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮೂಲಗಳ ಪ್ರಕಾರ ಕಾಂಬೋಡಿಯಾದಲ್ಲಿ ಸುಮಾರು 5000 ಭಾರತೀಯರು ಈ ರೀತಿ ದುರ್ಬಳಕೆ ಒಳಗಾಗಿದ್ದು, ಭಾರತೀಯರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಸುಮಾರು ಈ ಜಾಲದಲ್ಲಿ ಸಿಲುಕಿಕೊಂಡಿದ್ದ ಸುಮಾರು 250 ಮಂದಿ ಭಾರತೀಯರನ್ನು ರಕ್ಷಣೆ ಮಾಡಲಾಗಿದೆ.
ಈ ಪೈಕಿ ಈ ಜಾಲಕ್ಕೆ ಸಿಲುಕಿಕೊಂಡಿದ್ದ 75 ಮಂದಿಯನ್ನು ಕಳೆದ ಮೂರು ತಿಂಗಳಲ್ಲಿ ರಕ್ಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ರಕ್ಷಿಸಲ್ಪಟ್ಟ ಎಲ್ಲ 250 ಮಂದಿ ಭಾರತೀಯರನ್ನು ಇದೀಗ ಸ್ವದೇಶ ಭಾರತಕ್ಕೆ ರವಾನೆ ಮಾಡಲಾಗಿದೆ.
ಕೇಂದ್ರ ವಿದೇಶಾಂಗ ಇಲಾಖೆಯ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ತಮ್ಮ ಹೇಳಿಕೆಯಲ್ಲಿ, “ಕಾಂಬೋಡಿಯಾದಲ್ಲಿರುವ ನಮ್ಮ ರಾಯಭಾರ ಕಚೇರಿಯು ಆ ದೇಶಕ್ಕೆ ಉದ್ಯೋಗಾವಕಾಶಗಳ ಆಮಿಷದ ಮೇರೆಗೆ ಹೋಗಿ ಸೈಬರ್ ಕ್ರೈಂ ಅಪರಾಧಗಳಿಗೆ ತುತ್ತಾಗಿದ್ದ ಭಾರತೀಯ ಪ್ರಜೆಗಳ ದೂರುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುತ್ತಿದೆ ಎಂದು ಹೇಳಿದ್ದಾರೆ.
ಅಲ್ಲದೆ ತಮ್ಮ ಅಧಿಕಾರಿಗಳು ಕಾಂಬೋಡಿಯನ್ ಅಧಿಕಾರಿಗಳೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದ್ದು, ಅವರ ಸಹಯೋಗದೊಂದಿಗೆ, ಇದು ಸುಮಾರು 250 ಭಾರತೀಯರನ್ನು ರಕ್ಷಿಸಿದೆ ಮತ್ತು ಸ್ವದೇಶಕ್ಕೆ ಕಳುಹಿಸಿದೆ ಎಂದು ಅವರು ಹೇಳಿದರು.
ಅಂತೆಯೇ MEA ಕಾಂಬೋಡಿಯಾದಲ್ಲಿರುವ ಭಾರತದ ರಾಯಭಾರ ಕಚೇರಿಯಿಂದ ಇಂತಹ ಹಗರಣಗಳ ಬಗ್ಗೆ ಮಾಹಿತಿ ನೀಡಿದ್ದು, ಭಾರತೀಯರಿಗೆ ಹಲವಾರು ಸಲಹೆಗಳನ್ನು ನೀಡಲಾಗಿದೆ. ಸಚಿವಾಲಯದ ಬೆಂಬಲವನ್ನು ಪಡೆಯುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು MEA ಬದ್ಧವಾಗಿದೆ ಎಂದು ಜೈಸ್ವಾಲ್ ಹೇಳಿದ್ದಾರೆ. ಈ ಮೋಸದ ಯೋಜನೆಗಳಿಗೆ ಜವಾಬ್ದಾರರಾಗಿರುವವರನ್ನು ದಮನ ಮಾಡಲು ಭಾರತದಲ್ಲಿನ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
Advertisement