ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮಾವೋವಾದಿ ಅಡಗುತಾಣ ಪತ್ತೆ, ಅಪಾರ ಪ್ರಮಾಣದ ಸ್ಫೋಟಕ ವಶಕ್ಕೆ!
ಮುಂಬೈ: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಭದ್ರತಾ ಪಡೆಗಳು ಮಾವೋವಾದಿ ಅಡಗುತಾಣವನ್ನು ಪತ್ತೆ ಮಾಡಿದ್ದು, ಅಪಾರ ಪ್ರಮಾಣದ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ.
ಗಡ್ಚಿರೋಲಿ ಪೊಲೀಸರು ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮಾವೋವಾದಿಗಳ ಶಿಬಿರವನ್ನು ಪತ್ತೆ ಮಾಡಿದ್ದು, ಜಿಲೆಟಿನ್ ಸ್ಟಿಕ್‌ಗಳು, ಡಿಟೋನೇಟರ್‌ಗಳು ಮತ್ತು ಇತರ ವಸ್ತುಗಳನ್ನು ಸೇರಿ ಭಾರಿ ಪ್ರಮಾಣಜ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಕೆಲವು ಶಸ್ತ್ರಸಜ್ಜಿತ ಮಾವೋವಾದಿಗಳು ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಚುಟಿಂತೋಲಾ ಗ್ರಾಮದ ಬಳಿ ಮೊಕ್ಕಾಂ ಹೂಡಿದ್ದಾರೆ ಎಂದು ಶುಕ್ರವಾರ ತಡರಾತ್ರಿ ಪೊಲೀಸರಿಗೆ ಗುಪ್ತಚರ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದ ಭದ್ರತಾ ಪಡೆಗಳು ಶಿಬಿರದ ಮೇಲೆ ದಾಳಿ ನಡೆಸಿದ್ದಾರೆ ಎಂದು ಗಡ್ಚಿರೋಲಿಯ ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು ಮತ್ತು ಗಡ್ಚಿರೋಲಿ ಪೊಲೀಸರ ವಿಶೇಷ ಘಟಕವಾದ C-60 ಪಡೆಗಳು ಮಾವೋವಾದಿ ವಿರೋಧಿ ಕಾರ್ಯಾಚರಣೆ ನಡೆಸಿ ಶಿಬಿರದ ಮೇಲೆ ದಾಳಿ ಮಾಡಿದ್ದವು. ಶನಿವಾರ ಬೆಳಿಗ್ಗೆ, ಸಿ-60 ಘಟಕಗಳು 450 ಮೀಟರ್ ಎತ್ತರದ ಬೆಟ್ಟವನ್ನು ತಲುಪಿದವು. ಭದ್ರತಾ ಪಡೆಗಳು ಆಗಮಿಸುತ್ತಲೇ ಅಲ್ಲಿಂದ ಮಾವೋವಾದಿಗಳು ಓಡಿಹೋದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾವೋವಾದಿಗಳ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ವೇಳೆ ಬೆಟ್ಟದ ತುದಿಯಲ್ಲಿ ಬೃಹತ್ ಆಶ್ರಯ ಮತ್ತು ಮಾವೋವಾದಿ ಶಿಬಿರ ಕಂಡುಬಂದಿದೆ, ಮಾವೋವಾದಿಗಳು ಅತ್ಯಂತ ಕಷ್ಟಕರವಾದ ಭೂಪ್ರದೇಶ ಮತ್ತು ಅಲೆಗಳ ಪರ್ವತಗಳ ಲಾಭವನ್ನು ಪಡೆದುಕೊಂಡು ಆ ಸ್ಥಳದಲ್ಲಿ ಶಿಬಿರ ನಿರ್ಮಿಸಿಕೊಂಡಿದ್ದರು. ಭದ್ರತಾ ಪಡೆಗಳು ಅಲ್ಲಿಗೆ ದೌಡಾಯಿಸುತ್ತವೇ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಬಿರದ ಮೇಲೆ ದಾಳಿ ಮೇಳೆ ಡಿಟೋನೇಟರ್‌ಗಳು, ಜಿಲೆಟಿನ್ ಸ್ಟಿಕ್‌ಗಳು, ಕಾರ್ಡೆಕ್ಸ್ ವೈರ್‌ಗಳು, ಬ್ಯಾಟರಿಗಳು, ವಾಕಿ-ಟಾಕಿ ಚಾರ್ಜರ್‌ಗಳು, ಬ್ಯಾಕ್‌ಪ್ಯಾಕ್‌ಗಳು ಮತ್ತು ಮಾವೋವಾದಿ ಸಾಹಿತ್ಯ ಸೇರಿದಂತೆ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ನಂತರ ಶಿಬಿರವನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.