ನವದೆಹಲಿ: ಮಾಜಿ ಸಚಿವ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಬಿಜೆಪಿಗೆ ಮರು ಸೇರ್ಪಡೆಗೊಂಡಿರುವ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, '35,000 ಕೋಟಿ ರೂ. ಹಗರಣದ ಆರೋಪಿ ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದಾರೆ. ಅವರ ವಿರುದ್ಧ 9 ಸಿಬಿಐ ಪ್ರಕರಣಗಳು ಸೇರಿದಂತೆ 20 ವಿವಿಧ ಪ್ರಕರಣಗಳಿವೆ. ಅರಣ್ಯ ಮತ್ತು ಗಣಿ ನಾಶದ ಆರೋಪಗಳಿವೆ. ಜಾಮೀನಿಗಾಗಿ ನ್ಯಾಯಾಧೀಶರನ್ನು 40 ಕೋಟಿ ರೂ.ಗೆ ಖರೀದಿಸುವ ಪ್ರಯತ್ನ ನಡೆದಿದೆ' ಎಂದು ದೂರಿದರು.
ಪ್ರಧಾನಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಬಿಜೆಪಿ ಅವರನ್ನು ಮುಕ್ತಕಂಠದಿಂದ ಸ್ವಾಗತಿಸುತ್ತಿದೆ. ಮೋದಿಜಿಯವರು ಬಿಜೆಪಿ ಎಂಬ ವಾಷಿಂಗ್ ಮೆಷಿನ್‌ನಲ್ಲಿ ದೇಶದಾದ್ಯಂತ ಇರುವ ಭ್ರಷ್ಟರನ್ನು ಆಯ್ದು ತೊಳೆಯುತ್ತಿದ್ದಾರೆ' ಎಂದು ಹೇಳಿದರು.
ಪ್ರಫುಲ್ ಪಟೇಲ್ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎಂಟು ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡ ಮಹಾರಾಷ್ಟ್ರದ ನಾಯಕರೊಬ್ಬರ ಪ್ರಕರಣದಲ್ಲಿ ಸಿಬಿಐ ಪ್ರಕರಣವನ್ನು ಮುಚ್ಚುವ ವರದಿ ಸಲ್ಲಿಸಿದೆ ಎಂದು ನಿನ್ನೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ಕಾಲದಲ್ಲಿ ಸಾವಿರಾರು ಕೋಟಿ ಹಗರಣದ ಆರೋಪ ಮಾಡಿದ್ದ ಪ್ರಧಾನಿ, ಈಗ ಅದೇ ವ್ಯಕ್ತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿ ಅವರ ಕಳಂಕಗಳನ್ನೆಲ್ಲ ತೊಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೇಂದ್ರದ ತನಿಖಾ ಸಂಸ್ಥೆಗಳ ದುರುಪಯೋಗ ಒಂದು ಕಡೆ, ಕುಖ್ಯಾತ ಭ್ರಷ್ಟರಿಗೆ ರಕ್ಷಣೆ ನೀಡುವುದು, ಪ್ರತಿಪಕ್ಷಗಳ ನಾಯಕರನ್ನು ತನಿಖಾ ಸಂಸ್ಥೆಗಳ ಮೂಲಕ ಬೆದರಿಸಿ, ತಮ್ಮ ತೆಕ್ಕೆಗೆ ತೆಗೆದುಕೊಂಡು ಕೇಸುಗಳನ್ನು ಮುಚ್ಚಿ ಹಾಕುವುದು ನಡೆಯುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಸುಳ್ಳು ಪ್ರಕರಣಗಳ ಮೂಲಕ, ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ ಪ್ರತಿಪಕ್ಷಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು.
Advertisement