
ರಾಂಚಿ: ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ರಾಂಚಿಯ ಹಲವು ಸ್ಥಳಗಳಲ್ಲಿ ಸೋಮವಾರ ದಾಳಿ ನಡೆಸಿದ್ದು, ಜಾರ್ಖಂಡ್ ಸಚಿವ ಅಲಂಗೀರ್ ಆಲಂ ಅವರ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆಯಲ್ಲಿ ದಾಖಲೆ ಇಲ್ಲದ 25 ಕೋಟಿ ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿ 2023 ರಲ್ಲಿ ಇಡಿ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ವೀರೇಂದ್ರ ರಾಮ್ ಎಂಬುವವರನ್ನು ಕೆಲವು ಯೋಜನೆಗಳ ಅನುಷ್ಠಾನಕ್ಕಾಗಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಬಂಧನಕ್ಕೊಳಪಡಿಸಲಾಗಿತ್ತು.
ಈ ಪ್ರಕರಣದಲ್ಲಿ ಮತ್ತಷ್ಟು ತನಿಖೆ ಕೈಗೊಂಡಿರುವ ಇಡಿ, ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿಯ ಮನೆಯ ಮೇಲೆ ದಾಳಿ ಮಾಡಿದೆ, ದಾಳಿ ವೇಳೆ ಕಂತೆ ಕಂತೆ ನೋಟುಗಳನ್ನು ಕಂಡು ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆಂದು ತಿಳಿದುಬಂದಿದೆ.
ಮನೆಯಲ್ಲಿ ಸಿಕ್ಕ ನೋಟಿನ ಕಂತೆಗಳ ಬೃಹತ್ ರಾಶಿ ಕಂಡು ಸ್ವತಃ ಇಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದು, ಈ ಹಣವನ್ನು ಲೆಕ್ಕ ಮಾಡಲು ಅಧಿಕ ಸಂಖ್ಯೆಯಲ್ಲಿ ನಗದು ಎಣಿಕೆ ಯಂತ್ರವನ್ನು ಸ್ಥಳಕ್ಕೆ ತರಿಸಿಕೊಂಡಿದ್ದಾರೆನ್ನಲಾಗಿದೆ. ಕಂತೆಗಳಲ್ಲಿನ ನಗದು ಹೆಚ್ಚಾಗಿ 500 ರುಪಾಯಿ ಮುಖಬೆಲೆಯಿದ್ದು, ಕೆಲವು ಆಭರಣಗಳನ್ನೂ ವಶಪಡಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಆಲಂ (70), ಕಾಂಗ್ರೆಸ್ ನಾಯಕರಾಗಿದ್ದು, ಜಾರ್ಖಂಡ್ ವಿಧಾನಸಭೆಯಲ್ಲಿ ಪಾಕುರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ನಡುವೆ ಇಡಿ ದಾಳಿ ನಡೆಸಿರುವುದು, ರಾಶಿ ರಾಶಿ ಹಣ ಪತ್ತೆಯಾಗಿರುವುದು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಈ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಲಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಎಣಿಕೆ ಮುಗಿಯಲಿ, ಈ ಸಂಖ್ಯೆ 50 ಕೋಟಿ ತಲುಪಲಿದೆ. ಇಡೀ ಜಾರ್ಖಂಡ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದ್ದಾರೆ.
Advertisement