
ನವದೆಹಲಿ: ಕಾಂಗ್ರೆಸ್ ಪ್ರಣಾಳಿಕೆಯನ್ನು ಟೀಕಿಸಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪಕ್ಷದ ಹಿರಿಯ ನಾಯಕ ಪಿ ಚಿದಂಬರಂ, ಬಿಜೆಪಿ ನಾಯಕರು 'ಸಂಪತ್ತಿನ ಉತ್ಪಾದನೆ' ಎಂಬ ಪದವನ್ನು 'ಸಂಪತ್ತಿನ ಮರುಹಂಚಿಕೆ' ಎಂದು ಓದಿದರೆ ಅವರು ಮಿಡ್ಲ್ ಸ್ಕೂಲ್ ಗೆ ಹೋಗಲಿ ಇಲ್ಲವೇ ಕಣ್ಣಿನ ಡಾಕ್ಟರ್ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯನ್ನು ಸಿದ್ಧಪಡಿಸಿದ ಸಮಿತಿಯ ನೇತೃತ್ವ ವಹಿಸಿದ್ದ ಚಿದಂಬರಂ, ತಮ್ಮ ಪಕ್ಷವು ದೇಶದಲ್ಲಿ ತ್ವರಿತ ಬೆಳವಣಿಗೆ ಮತ್ತು ಸಂಪತ್ತಿನ ಉತ್ಪಾದನೆಗೆ ಬದ್ಧವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆಯು ಕೈಗಾರಿಕೆ ಮತ್ತು ವ್ಯಾಪಾರ ನೀತಿ- ನಿಬಂಧನೆಗಳನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ಹೆಚ್ಚಿನ ಮೌಲ್ಯಗಳಲ್ಲಿ ಸರಕು ಮತ್ತು ಸೇವೆಗಳ ಉತ್ಪಾದನೆಗೆ ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ ಎಂದರು.
ಮುಕ್ತ ಮತ್ತು ನ್ಯಾಯಯುತ ವ್ಯಾಪಾರವನ್ನು ತಡೆಯುವ ಎಲ್ಲಾ ಕಾನೂನುಗಳು ಮತ್ತು ನಿಯಮಗಳನ್ನು ಪರಿಶೀಲಿಸಲಾಗುವುದು ಮತ್ತು ಬದಲಾಯಿಸಲಾಗುವುದು ಎಂದು ಅವರು ಹೇಳಿದರು.
ಯುಪಿಎ ಅಧಿಕಾರದಲ್ಲಿ ಮುಂದುವರಿದಿದ್ದರೆ, ಆರ್ಥಿಕತೆಯು ಮತ್ತೆ ದ್ವಿಗುಣಗೊಳ್ಳುತ್ತಿತ್ತು. 2023-24ರಲ್ಲಿ 200 ಲಕ್ಷ ಕೋಟಿ ರೂ.ಗೆ ತಲುಪುತ್ತಿತ್ತು ಎಂದಿದ್ದಾರೆ. ತ್ವರಿತ ಬೆಳವಣಿಗೆ ಮತ್ತು ಸಂಪತ್ತಿನ ಉತ್ಪಾದನೆಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಅವರು ಹೇಳಿದರು.
ಮುಂದಿನ 10 ವರ್ಷಗಳಲ್ಲಿ ಜಿಡಿಪಿಯನ್ನು ದ್ವಿಗುಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.
Advertisement