
ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೀಡಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾದರೂ ಅವರು ಮುಖ್ಯಮಂತ್ರಿಯಾಗಿ ಕಡತಗಳಿಗೆ ಸಹಿ ಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಬಂಧನದಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ನ್ಯಾ ಸಂಜೀವ್ ಖನ್ನಾ ಮತ್ತು ನ್ಯಾ ದಿಪಾಂಕರ್ ದತ್ತಾ ಅವರನ್ನು ಒಳಗೊಂಡ ದ್ವಿ ಸದಸ್ಯ ನ್ಯಾಯಪೀಠ, ಅರವಿಂದ್ ಕೇಜ್ರಿವಾಲ್ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದರೂ ಅವರು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದು ಸಾಧ್ಯವಿಲ್ಲ. ಏಕೆಂದರೆ ಅದು ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಜ್ರಿವಾಲ್ ರೂಢಿಗತ ಅಪರಾಧಿ ಅಲ್ಲ
ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಅವರು 'ರೂಢಿಗತ ಅಪರಾಧಿ' ಅಲ್ಲ ಎಂದು ಹೇಳಿದ ಪೀಠ, ಇದು ಒಂದು ಅಸಾಧಾರಣ ಸನ್ನಿವೇಶ. ಅವರು ರೂಢಿಗತ ಅಪರಾಧಿ ಅಲ್ಲ. ಚುನಾವಣೆ ಐದು ವರ್ಷಕ್ಕೆ ಒಮ್ಮೆ ಬರುತ್ತದೆ. ಪ್ರತಿ ನಾಲ್ಕರಿಂದ ಆರು ತಿಂಗಳಿಗೆ ಬೆಳೆ ಕಟಾವು ಮಾಡುವ ರೀತಿ ಅಲ್ಲ ಇದು. ಅವರನ್ನು ಮಧ್ಯಂತರ ಜಾಮೀನಿನ ಅಡಿ ಬಿಡುಗಡೆ ಮಾಡಬಹುದೇ ಎಂಬುದನ್ನು ನಾವು ಆದ್ಯತೆ ಮೇರೆಗೆ ಪರಿಗಣಿಸಬೇಕಿದೆ" ಎಂದು ಹೇಳಿತು.
ಲೋಕಸಭೆ ಚುನಾವಣೆ ಇಲ್ಲದೆ ಹೋಗಿದ್ದರೆ ಮದ್ಯಂತರ ಜಾಮೀನಿನ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ" ಎಂದು ಹೇಳಿದ ನ್ಯಾ ದತ್ತಾ ಅವರು, "ಇದು ಒಡೆತನ, ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆ" ಎಂಬ ನ್ಯಾ ಖನ್ನಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಆದರೆ ಅಬಕಾರಿ ನೀತಿ ಹಗರಣದಲ್ಲಿ ಸಿಎಂ ಪಾತ್ರ ಮುಖ್ಯವಾಗಿದೆ ಎಂಬ ಇಡಿ ಆರೋಪವನ್ನು ಗಮನಿಸಿದ ನ್ಯಾಯಪೀಠ, "ಒಂದು ವೇಳೆ ನಾವು ನಿಮ್ಮನ್ನು ಬಿಡುಗಡೆ ಮಾಡಿದರೆ ನೀವು ಚುನಾವಣೆಯಲ್ಲಿ ಭಾಗವಹಿಸಲು ಅನುಮತಿ ಪಡೆಯುತ್ತೀರಿ. ನೀವು ಅಧಿಕೃತ ಕರ್ತವ್ಯಗಳನ್ನೂ ನಿಭಾಯಿಸುತ್ತೀರಿ. ಇದು ನಕಾರಾತ್ಮಕ ಪರಿಣಾಮ ಉಂಟುಮಾಡಬಹುದು. ನಾವು ಸ್ಪಷ್ಟವಾಗಿ ಹೇಳುತ್ತೇವೆ. ನಾವು ನಿಮ್ಮನ್ನು ಬಿಡುಗಡೆ ಮಾಡಿದರೆ ನೀವು ಅಧಿಕೃತ ಕರ್ತವ್ಯ ನಿಭಾಯಿಸುವುದನ್ನು ನಾವು ಬಯಸುವುದಿಲ್ಲ" ಎಂದು ಕೋರ್ಟ್ ಪುನರುಚ್ಚರಿಸಿತು.
ಕೋರ್ಟ್ ಸಲಹೆ ತಿರಸ್ಕರಿಸಿದ ಇಡಿ ಪರ ವಕೀಲರು
ಆದರೆ, ಕೋರ್ಟ್ ಸಲಹೆಯನ್ನು ತಿರಸ್ಕರಿಸಿದ ಜಾರಿ ನಿರ್ದೇಶನಾಲಯ, ಇದು ತಪ್ಪು ಉದಾಹರಣೆ ಸೃಷ್ಟಿಸಲಿದೆ ಎಂದು ವಾದಿಸಿತು. ಈ ಕುರಿತು ತಮ್ಮ ವಾದ ಮಂಡಿಸಿದ ಜಾರಿ ನಿರ್ದೇಶನಾಲಯದ ಪರ ವಕೀಲರು, 'ಸಾಮಾನ್ಯ ನಾಗರಿಕರಿಗೆ ಹೋಲಿಸಿದರೆ ರಾಜಕಾರಣಿಗೆ ವಿಶೇಷ ಹಕ್ಕುಗಳು ಇರುವುದಿಲ್ಲ. ವಿಚಾರಣೆ ಎದುರಿಸುತ್ತಿರುವ ಎಲ್ಲ ಸಂಸದರು ಮತ್ತು ಶಾಸಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೇ?" ಎಂದು ಪ್ರಶ್ನಿಸಿದರು.
''ಸಾಮಾನ್ಯ ವ್ಯಕ್ತಿಗೆ ಹೋಲಿಸಿದರೆ ರಾಜಕೀಯ ವ್ಯಕ್ತಿಗೆ ವಿಶೇಷ ಸವಲತ್ತು ನೀಡಬಹುದೇ? 5000 ಮಂದಿ ವಿಚಾರಣೆ ಎದುರಿಸುತ್ತಿದ್ದಾರೆ. ಅವರೆಲ್ಲರೂ ನಾವು ಪ್ರಚಾರಕ್ಕೆ ಹೋಗಬೇಕು ಎಂದರೆ ಏನಾಗಲಿದೆ? ಆರು ತಿಂಗಳಲ್ಲಿ 9 ಸಮನ್ಸ್‌ಗಳನ್ನು ನೀಡಲಾಗಿದೆ. ಇದೇ ಸಮಯವನ್ನು ಆಯ್ಕೆ ಮಾಡಿರುವುದಕ್ಕೆ ಜಾರಿ ನಿರ್ದೇಶನಾಲಯವನ್ನು ದೂಷಿಸಲು ಸಾಧ್ಯವಿಲ್ಲ. ಅವರಿಗೆ ಇನ್ನೂ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಹೀಗಾಗಿ ಈ ಹಂತದಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡಬಹುದೇ?" ಎಂದು ಹೇಳಿದರು.
ಈ ವೇಳೆ ಇಡಿ ಪ್ರಸ್ತಾಪಿಸಿದ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವಂತೆ ಕೇಜ್ರಿವಾಲ್ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಕೋರ್ಟ್ ಸೂಚಿಸಿತು.
ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಇದೇ ವೇಳೆ ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿದ್ದು, ಗುರುವಾರ ಅಥವಾ ಮುಂದಿನ ವಾರ ಮತ್ತೆ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.
Advertisement