ಸುಪ್ರೀಂ ನಿರ್ಬಂಧಗಳಿಗೆ AK ಕಂಪನ: 50 ದಿನಗಳ ಬಳಿಕ ಜೈಲಿನಿಂದ ಹೊರಬಂದ ಕೇಜ್ರಿವಾಲ್‌ಗೆ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ!

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 50 ದಿನಗಳ ನಂತರ ಇಂದು ಸಂಜೆ ತಿಹಾರ್ ಜೈಲಿನಿಂದ ಹೊರಬಂದಿದ್ದು ಅವರಿಗೆ ಎಎಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 50 ದಿನಗಳ ನಂತರ ಇಂದು ಸಂಜೆ 6.55ಕ್ಕೆ ತಿಹಾರ್ ಜೈಲಿನಿಂದ ಹೊರಬಂದಿದ್ದು ಅವರಿಗೆ ಎಎಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಇಂದು ಬೆಳ್ಳಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್ 2ರಂದು ಯಾವುದೇ ಪರಿಸ್ಥಿತಿಯಲ್ಲಿ ಶರಣಾಗುವಂತೆ ಅವರಿಗೆ ತಿಳಿಸಲಾಗಿದೆ.

ಬಿಡುಗಡೆಯಾದ ನಂತರ ಮಾತನಾಡಿದ ಕೇಜ್ರಿವಾಲ್, 'ನಾವೆಲ್ಲರೂ ಒಗ್ಗೂಡಿ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕೆಂದು ನಿಮ್ಮಲ್ಲಿ ವಿನಂತಿಸುತ್ತೇನೆ. ನಾನು ನನ್ನ ದೇಹ, ಮನಸ್ಸು ಮತ್ತು ಹಣದೊಂದಿಗೆ ಹೋರಾಡುತ್ತಿದ್ದೇನೆ. ಸರ್ವಾಧಿಕಾರದ ವಿರುದ್ಧ ಹೋರಾಟ. ಇಂದು ನಿಮ್ಮ ನಡುವೆ ಇರುವುದು ಒಳ್ಳೆಯದೆನಿಸುತ್ತಿದೆ ಎಂದರು. ನಾಳೆ ಬೆಳಗ್ಗೆ ಹನುಮನ ಆಶೀರ್ವಾದ ಪಡೆದು ಮಧ್ಯಾಹ್ನ 1 ಗಂಟೆಗೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ಏಪ್ರಿಲ್ 1 ರಿಂದ (39 ದಿನಗಳು) ತಿಹಾರ್ ಜೈಲಿನಲ್ಲಿದ್ದರು. ಇಂದು ಮಧ್ಯಾಹ್ನ 2 ಗಂಟೆಗೆ ಸುಪ್ರೀಂ ಕೋರ್ಟ್ ಒಂದೇ ಸಾಲಿನಲ್ಲಿ ತೀರ್ಪು ಪ್ರಕಟಿಸಿತ್ತು. ಇನ್ನು ಜೂನ್ 5ರವರೆಗೆ ಬಿಡುಗಡೆ ಮಾಡುವಂತೆ ಅವರ ವಕೀಲರು ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅಲ್ಲದೆ ಜೂನ್ 1ಕ್ಕೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಕೋರ್ಟ್ ಹೇಳಿದೆ.

ಅರವಿಂದ್ ಕೇಜ್ರಿವಾಲ್
Delhi excise policy case: ಅರವಿಂದ್ ಕೇಜ್ರಿವಾಲ್ ಗೆ ಕೊನೆಗೂ ಬಿಗ್ ರಿಲೀಫ್, ಮದ್ಯಂತರ ಜಾಮೀನು ಮಂಜೂರು

ಜಾಮೀನು ನೀಡುವುದರೊಂದಿಗೆ ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳನ್ನೂ ವಿಧಿಸಿದೆ. ಈ ಷರತ್ತುಗಳ ಪ್ರಕಾರ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಕಚೇರಿಗೆ ಹೋಗುವಂತಿಲ್ಲ, ಸೆಕ್ರೆಟರಿಯೇಟ್‌ಗೂ ಹೋಗುವಂತಿಲ್ಲ. ಇದರೊಂದಿಗೆ, ಅವರು ತಮ್ಮ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿಗಳನ್ನು ಸಂಪರ್ಕಿಸಲು ಪ್ರಯತ್ನಿಸುವುದಿಲ್ಲ. ಸುಪ್ರೀಂ ಕೋರ್ಟ್ 5 ಪ್ರಮುಖ ಷರತ್ತುಗಳ ಮೇಲೆ ಕೇಜ್ರಿವಾಲ್‌ಗೆ ಜಾಮೀನು ನೀಡಿದೆ.

ಕೇಜ್ರಿವಾಲ್‌ ಗೆ 5 ಪ್ರಮುಖ ಷರತ್ತುಗಳು ವಿಧಿಸಿದ ಸುಪ್ರೀಂ

1. ತಿಹಾರ್ ಜೈಲಿನಿಂದ ಬಿಡುಗಡೆಯಾಗಲು, ಅರವಿಂದ್ ಕೇಜ್ರಿವಾಲ್ 50 ಸಾವಿರ ರೂ ಜಾಮೀನು ಮತ್ತು ಅದೇ ಮೊತ್ತದ ಬಾಂಡ್ ಅನ್ನು ಠೇವಣಿ ಇಡಬೇಕಾಗುತ್ತದೆ.

2. ಅರವಿಂದ್ ಕೇಜ್ರಿವಾಲ್ ಯಾವುದೇ ಸಾಕ್ಷಿಯೊಂದಿಗೆ ಮಾತನಾಡಬಾರದು ಅಥವಾ ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ಫೈಲ್‌ಗಳನ್ನು ನೋಡಬಾರದು.

3. ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಕಚೇರಿ ಮತ್ತು ದೆಹಲಿ ಸಚಿವಾಲಯಕ್ಕೆ ಹೋಗಬಾರದು.

4. ತೀರಾ ಅವಶ್ಯವಿದ್ದಲ್ಲಿ ಅರವಿಂದ್ ಕೇಜ್ರಿವಾಲ್ ಯಾವುದೇ ಕಡತಕ್ಕೆ ಸಹಿ ಹಾಕಬೇಕಾದರೆ ಅದಕ್ಕೆ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿಯನ್ನು ಪಡೆಯಬೇಕು.

5. ಮದ್ಯ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪಾತ್ರದ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಲೋಕಸಭೆ ಚುನಾವಣಾ ಪ್ರಚಾರದ ದೃಷ್ಟಿಯಿಂದ ಕೇಜ್ರಿವಾಲ್ ಅವರಿಗೆ ನ್ಯಾಯಾಲಯದಿಂದ ಸಿಕ್ಕಿರುವ ಈ ರಿಲೀಫ್ ಬಹಳ ಮಹತ್ವದ್ದು. ಈ ಮೂಲಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹೊಸ ರೀತಿಯಲ್ಲಿ ಶಕ್ತಿ ತುಂಬುತ್ತಿರುವುದನ್ನು ಈಗ ಕಾಣಬಹುದು. ನ್ಯಾಯಾಲಯದ ಈ ತೀರ್ಪಿನ ನಂತರ, 'ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೆನ್‌ಗೂ ಜಾಮೀನು ಸಿಗಬಹುದೇ?' ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com