ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವುದಲ್ಲ: ಕೆನಡಾಗೆ ಕುಟುಕಿದ ಜೈಶಂಕರ್

ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ರಾಜಕೀಯ ಬೆಂಬಲ ನೀಡುವ ಮೂಲಕ ಕೆನಡಾ ಸರ್ಕಾರವು ತನ್ನ ವೋಟ್ ಬ್ಯಾಂಕ್ ದೇಶದ ಕಾನೂನಿನ ನಿಯಮಕ್ಕಿಂತ 'ಹೆಚ್ಚು ಶಕ್ತಿಶಾಲಿ' ಎಂಬ ಸಂದೇಶವನ್ನು ರವಾನಿಸುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್
ವಿದೇಶಾಂಗ ಸಚಿವ ಎಸ್ ಜೈಶಂಕರ್PTI

ನವದೆಹಲಿ: ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ರಾಜಕೀಯ ಬೆಂಬಲ ನೀಡುವ ಮೂಲಕ ಕೆನಡಾ ಸರ್ಕಾರವು ತನ್ನ ವೋಟ್ ಬ್ಯಾಂಕ್ ದೇಶದ ಕಾನೂನಿನ ನಿಯಮಕ್ಕಿಂತ 'ಹೆಚ್ಚು ಶಕ್ತಿಶಾಲಿ' ಎಂಬ ಸಂದೇಶವನ್ನು ರವಾನಿಸುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜೈಶಂಕರ್ ಅವರು, ಭಾರತವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಮತ್ತು ಅದಕ್ಕೆ ಬದ್ಧವಾಗಿದೆ. ಆದರೆ ವಿದೇಶಿ ರಾಜತಾಂತ್ರಿಕರಿಗೆ ಬೆದರಿಕೆ ಹಾಕುವುದು, ಪ್ರತ್ಯೇಕತಾವಾದವನ್ನು ಬೆಂಬಲಿಸುವುದು ಅಥವಾ ಹಿಂಸಾಚಾರವನ್ನು ಪ್ರತಿಪಾದಿಸುವ ಅಂಶಗಳಿಗೆ ರಾಜಕೀಯ ಪ್ರೋತ್ಸಾಹ ನೀಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಆಗಲ್ಲ ಎಂದು ಹೇಳಿದರು.

ಪಂಜಾಬ್‌ನ ಸಿಖ್ ವಲಸಿಗರಲ್ಲಿ ಖಾಲಿಸ್ತಾನ್ ಬೆಂಬಲಿಗರನ್ನು ಉಲ್ಲೇಖಿಸಿದ ವಿದೇಶಾಂಗ ಸಚಿವರು, ಸಂಶಯಾಸ್ಪದ ಹಿನ್ನೆಲೆ ಹೊಂದಿರುವ ಜನರಿಗೆ ಕೆನಡಾಕ್ಕೆ ಪ್ರವೇಶಿಸಲು ಮತ್ತು ಅಲ್ಲಿ ಉಳಿದುಕೊಳ್ಳುವುದಕ್ಕೆ ಹೇಗೆ ಅವಕಾಶ ನೀಡುತ್ತಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಯಾವುದೇ ನಿಯಮಾಧಾರಿತ ಸಮಾಜದಲ್ಲಿ ಜನರ ಹಿನ್ನೆಲೆ, ಅವರು ಹೇಗೆ ಬಂದರು, ಅವರು ಯಾವ ಪಾಸ್‌ಪೋರ್ಟ್ ಹೊಂದಿದ್ದರು ಇತ್ಯಾದಿಗಳನ್ನು ಪರಿಶೀಲಿಸುತ್ತದೆ. ಆದರೆ ಸಂಶಯಾಸ್ಪದ ದಾಖಲೆಗಳು ಹೊಂದಿರುವವರು ನಿಮ್ಮಲ್ಲಿ ಉಳಿದುಕೊಂಡಿದ್ದರೆ ಅದು ನಿಮ್ಮ ಬಗ್ಗೆ ಏನು ಹೇಳುತ್ತದೆ? ನಿಮ್ಮ ವೋಟ್ ಬ್ಯಾಂಕ್ ನಿಮ್ಮ ಕಾನೂನಿನ ನಿಯಮಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಅದು ನಿಜವಾಗಿ ಹೇಳುತ್ತದೆ ಎಂದು ಜೈಶಂಕರ್ ಹೇಳಿದರು.

ವಿದೇಶಾಂಗ ಸಚಿವ ಎಸ್ ಜೈಶಂಕರ್
'ಇನ್ನು ಕೈಕಟ್ಟಿ ಕುಳಿತಿರುವುದು ಅಸಾಧ್ಯ...': ಭಯೋತ್ಪಾದನೆ ಕುರಿತು ಪಾಕಿಸ್ತಾನಕ್ಕೆ ಎಸ್ ಜೈಶಂಕರ್ ನೇರ ಎಚ್ಚರಿಕೆ!

ಇದು ಆಯ್ಕೆಗಳ ಕೊರತೆಯ ಪ್ರಶ್ನೆಯಲ್ಲ. ನಾವು ಕಂಡಿರುವುದು ಕೆನಡಾದ ರಾಜಕೀಯದ ದಿಕ್ಕು ಎಂದು ನಾವು ವಿಷಾದಿಸುತ್ತೇವೆ. ಅಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿ ಶಕ್ತಿಗಳು, ಹಿಂಸಾಚಾರವನ್ನು ಬಹಿರಂಗವಾಗಿ ಪ್ರತಿಪಾದಿಸುವ ಅನೇಕರಿಗೆ ಆ ದೇಶದಲ್ಲಿ ರಾಜಕೀಯ ಆಶ್ರಯ ನೀಡಲಾಗಿದೆ. ಇಂದು ಕೆನಡಾದ ರಾಜಕೀಯದಲ್ಲಿ ಪ್ರಮುಖ ಸ್ಥಾನಗಳಲ್ಲಿ ಜನರು ಆ ರೀತಿಯ ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಬೆಂಬಲಿಸುತ್ತಾರೆ ಎಂದು ಜೈಶಂಕರ್ ಹೇಳಿದರು.

ಕೆನಡಾದಲ್ಲಿರುವ ಭಾರತೀಯ ವಲಸಿಗರ ಸಂಖ್ಯೆ ಸರಿಸುಮಾರು 18 ಲಕ್ಷ ಮತ್ತು ಇನ್ನೂ ಒಂದು ಮಿಲಿಯನ್ ಅನಿವಾಸಿ ಭಾರತೀಯರು ದೇಶದಲ್ಲಿ ವಾಸಿಸುತ್ತಿದ್ದಾರೆ. ದೇಶದಲ್ಲಿರುವ ಹೆಚ್ಚಿನ ಭಾರತೀಯ ವಲಸಿಗರು ಸಿಖ್ಖರಾಗಿದ್ದು, ಅವರನ್ನು ಅಲ್ಲಿನ ರಾಜಕೀಯದಲ್ಲಿ ಪ್ರಭಾವಿ ಗುಂಪು ಎಂದು ಪರಿಗಣಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ 'ಸಂಭವನೀಯ' ಭಾಗಿತ್ವವನ್ನು ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು.

ಟ್ರುಡೊ ಅವರ ಆರೋಪಗಳನ್ನು ಭಾರತ 'ಅಸಂಬದ್ಧ' ಎಂದು ತಿರಸ್ಕರಿಸಿತ್ತು. ಕೆನಡಾದ ನೆಲದಿಂದ ಕಾರ್ಯಾಚರಿಸುತ್ತಿರುವ ಖಲಿಸ್ತಾನಿ ಪರವಾದ ಅಂಶಗಳಿಗೆ ಕೆನಡಾದ ಬೆಂಬಲವೇ ಮುಖ್ಯ ವಿಷಯ ಎಂದು ಭಾರತ ಹೇಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com