
ನವದೆಹಲಿ: ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, 'ಪಾಕಿಸ್ತಾನವನ್ನು ಕೆಣಕಬೇಡಿ.. ಅದರ ಬಳಿ ಅಣುಬಾಂಬ್ ಇದೆ' ಎಂದು ಹೇಳಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಮಣಿಶಂಕರ್ ಅಯ್ಯರ್, ಭಾರತ ಪಾಕಿಸ್ತಾನಕ್ಕೆ ಗೌರವ ಕೊಡಬೇಕು ಎಂದು ಹೇಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಕಿಸ್ತಾನದ ಬಳಿ ಅಣುಬಾಂಬ್‌ಗಳಿವೆ.
ಭಾರತ ಕೇವಲ ವಿಶ್ವಗುರು ಎಂದು ಹೇಳುತ್ತಾ ಇದ್ದರೆ ಸಾಲದು ನೆರೆಯ ರಾಷ್ಟ್ರ ಪಾಕಿಸ್ತಾನದ ಜೊತೆ ಮೊದಲು ಶಾಂತಿಯುತ ಮಾತುಕತೆ ನಡೆಸಬೇಕು. ಯಾವಾಗಲೂ ಕೈಯಲ್ಲಿ ಬಂದೂಕು ಹಿಡಿದು ಸುತ್ತಾಡಿದರೆ ಯಾವ ಕೆಲಸವೂ ಆಗಲ್ಲ, ಯಾವ ಪರಿಹಾರವೂ ಸಿಗಲ್ಲ. ಅದು ಕೇವಲ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.
ಅಂತೆಯೇ ಪಾಕಿಸ್ತಾನ ಕೂಡ ಸಾರ್ವಭೌಮ ರಾಷ್ಟ್ರ ಮತ್ತು ಅದಕ್ಕೆ ಅದರದ್ದೇ ಆದ ಗೌರವ ಇದೆ. ಒಂದು ವೇಳೆ ಅಲ್ಲಿ ತಲೆಕೆಟ್ಟ ಮನುಷ್ಯ ಅಧಿಕಾರಕ್ಕೆ ಬಂದರೆ.. ಲಾಹೋರ್‌ನಲ್ಲಿ ಅಣುಬಾಂಬ್ ಸ್ಫೋಟಿಸಿದರೆ ಅದರ ಪರಿಣಾಮ ನಮ್ಮ ದೇಶದ ಭಾಗವಾಗಿರುವ ಅಮೃತಸರದ ಮೇಲೂ ಆಗುತ್ತದೆ. ಹೀಗಾಗಿ ನಾನು ಅವರನ್ನು ಗೌರವಿಸಲು ಪ್ರಾರಂಭಿಸಿದರೆ ಅವರು ಬಾಂಬ್ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಒಂದು ವೇಳೆ ಅವರನ್ನು ದ್ವೇಷಿಸಿದರೆ ಹುಚ್ಚನೊಬ್ಬ ಬಂದು ಬಾಂಬ್ ಸ್ಫೋಟಿಸುತ್ತಾನೆ ಎಂದು ಹೇಳಿದ್ದಾರೆ.
ಮಣಿಶಂಕರ್ ಅಯ್ಯರ್ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದೆ.
ಪಾಕಿಸ್ತಾನೀಯರು ಭಾರತದ ಅತಿದೊಡ್ಡ ಆಸ್ತಿ ಎಂದಿದ್ದ ಅಯ್ಯರ್
ಈ ಹಿಂದೆಯೂ ಇಂತಹುದೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಅಯ್ಯರ್ “ನನ್ನ ಅನುಭವದ ಪ್ರಕಾರ, ಪಾಕಿಸ್ತಾನಿಯರು ಬಹುಶಃ ಎದುರಿನವರಿಗೆ ಅತಿ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸುವ ಜನರು. ನಾವು ಸ್ನೇಹಪರರಾಗಿದ್ದರೆ ಅವರು ಅತಿಯಾದ ಸ್ನೇಹಪರರಾಗಿರುತ್ತಾರೆ ಮತ್ತು ನಾವು ದ್ವೇಷಿಸಿದರೆ ಅವರು ತುಂಬಾ ದ್ವೇಷಿಸಬಲ್ಲರು. ಪಾಕಿಸ್ತಾನದಂತೆ ನನ್ನನ್ನು ತೆರೆದ ತೋಳುಗಳಿಂದ ಸ್ವಾಗತಿಸಿದ ಇನ್ನೊಂದು ದೇಶಕ್ಕೆ ನಾನು ಯಾವತ್ತೂ ಹೋಗಿಲ್ಲ” ಎಂದು ಹೇಳಿದ್ದರು.
Advertisement