
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಟೆಂಪೋ ಬಿಲಿಯನೇರ್'ಗಳ ಕೈಗೊಂಬೆ ಚಕ್ರವರ್ತಿ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
'ಅದಾನಿ ಮತ್ತು ಅಂಬಾನಿ'ಯಿಂದ ಕಾಂಗ್ರೆಸ್ ಗೆ ಟೆಂಪೋಗಳಲ್ಲಿ ಕಂತೆ ಕಂತೆ ಹಣ ಹೋಗಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಾಗ್ದಾಳಿ ಮುಂದುವರೆಸಿದ್ದು, ಲಖನೌದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರ ತಮ್ಮ ಭಾಷಣದ ಆಯ್ದ ಭಾಗಗಳಿರುವ ವೀಡಿಯೊವನ್ನು ಎಕ್ಸ್‌ನಲ್ಲಿ ಇಂದು ಹಂಚಿಕೊಂಡಿದ್ದಾರೆ.
ವೀಡಿಯೋ ಜೊತೆಗೆ, "ನರೇಂದ್ರ ಮೋದಿ ಪ್ರಧಾನಿ ಅಲ್ಲ, ಅವರು ಒಬ್ಬ ಚಕ್ರವರ್ತಿ. 'ಟೆಂಪೋ ಬಿಲಿಯನೇರ್'ಗಳ ಕೈಗೊಂಬೆ ಚಕ್ರವರ್ತಿ' ಎಂದು ಹಿಂದಿಯಲ್ಲಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.
ಲಖನೌದಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು ಮತ್ತು ಅವರೊಬ್ಬ ‘ಚಕ್ರವರ್ತಿ’ ಎಂದಿದ್ದಾರೆ.
"ಮೋದಿ ಒಬ್ಬ ಚಕ್ರವರ್ತಿ.. ಅವರು ಪ್ರಧಾನಿ ಅಲ್ಲ, ಅವರಿಗೆ ಸಚಿವ ಸಂಪುಟ, ಸಂಸತ್ತು ಅಥವಾ ಸಂವಿಧಾನದೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು 21ನೇ ಶತಮಾನದ ಚಕ್ರವರ್ತಿ ಮತ್ತು ಎರಡ್ಮೂರು ಶ್ರೀಮಂತರಿಗಷ್ಟೇ ನಿಜವಾದ ಶಕ್ತಿ ಇದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
'ಅಂಬಾನಿ ಮತ್ತು ಅದಾನಿ' ಜೊತೆ ಕಾಂಗ್ರೆಸ್ 'ಡೀಲ್' ಮಾಡಿಕೊಂಡಿದೆ ಎಂದು ಕಳೆದ ಬುಧವಾರ ಆರೋಪಿಸಿದ್ದ ಪ್ರಧಾನಿ ಮೋದಿ, ಇಬ್ಬರು ಉದ್ಯಮಿಗಳಿಂದ 'ಟೆಂಪೋ ತುಂಬ ಕಪ್ಪು ಹಣ' ಪಡೆದಿದೆ. ಹೀಗಾಗಿ ರಾಹುಲ್ ಗಾಂಧಿ ಅವರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
Advertisement