
ಹೈದರಾಬಾದ್: ಹೈದರಾಬಾದ್‌ನ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿರುವ ಮಾಧವಿ ಲತಾ ಅವರು ಮತಗಟ್ಟೆಗೆ ಭೇಟಿ ನೀಡಿದಾಗ ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸುವ ವಿಡಿಯೋ ವೈರಲ್ ಆಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.
ವಿಡಿಯೋದಲ್ಲಿ ಬಿಜೆಪಿ ಅಭ್ಯರ್ಥಿಯು ಮತಗಟ್ಟೆಯೊಳಗಿದ್ದ ಮುಸ್ಲಿಂ ಮಹಿಳೆಯರನ್ನು ಬುರ್ಖಾ ತೆಗೆಸಿ, ಮತದಾರರ ಗುರುತಿನ ಚೀಟಿ ತೋರಿಸುವಂತೆ ಕೇಳುತ್ತಿರುವುದನ್ನು ಕಾಣಬಹುದು.
ವಿಡಿಯೋ ಕುರಿತು ಎಎನ್‌ಐ ಜತೆ ಮಾತನಾಡಿದ ಬಿಜೆಪಿ ನಾಯಕಿ ಮಾಧವಿ, ಮಹಿಳೆಯರ ಗುರುತನ್ನು ಮಾತ್ರ ಪರಿಶೀಲಿಸಿದ್ದೇನೆ ಮತ್ತು ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.
"ನಾನು ಅಭ್ಯರ್ಥಿಯಾಗಿದ್ದೇನೆ. ಕಾನೂನಿನ ಪ್ರಕಾರ ಅಭ್ಯರ್ಥಿಗೆ ಮುಖವಾಡಗಳಿಲ್ಲದೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕಿದೆ. ನಾನು ಪುರುಷ ಅಲ್ಲ, ನಾನು ಮಹಿಳೆ ಮತ್ತು ಬಹಳ ವಿನಮ್ರತೆಯಿಂದ ನಾನು ಅವರನ್ನು ವಿನಂತಿಸಿದ್ದೇನೆ. ಗುರುತಿನ ಚೀಟಿ ಪರಿಶೀಲಿಸಿರುವುದನ್ನೇ ವಿವಾದ ಮಾಡಲು ಬಯಸಿದರೆ, ಅವರು ಭಯಪಡುತ್ತಿದ್ದಾರೆ ಎಂದರ್ಥ ಎಂದಿದ್ದಾರೆ.
ಇದಕ್ಕೂ ಮುನ್ನ ಲತಾ ಅವರು ತಮ್ಮ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿದ್ದರು.
"ಪೊಲೀಸ್ ಸಿಬ್ಬಂದಿ ತುಂಬಾ ದಡ್ಡರಂತೆ ಕಾಣುತ್ತಾರೆ. ಅವರು ಸಕ್ರಿಯವಾಗಿಲ್ಲ ... ಅವರು ಏನನ್ನೂ ಪರಿಶೀಲಿಸುತ್ತಿಲ್ಲ. ಹಿರಿಯ ನಾಗರಿಕ ಮತದಾರರು ಇಲ್ಲಿಗೆ ಬರುತ್ತಾರೆ. ಆದರೆ ಅವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ" ಎಂದು ಬಿಜೆಪಿ ನಾಯಕಿ ಆರೋಪಿಸಿದ್ದರು.
ಮುಸ್ಲಿಂ ಮತದಾರರ ಐಡಿ ಪರಿಶೀಲಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಮಾಧವಿ ಲತಾ ಅವರ ವಿರುದ್ಧ ಮಲಕಪೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
Advertisement