
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮುಂಬೈ ನಿವಾಸದ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಪೇದೆಯೊಬ್ಬರು ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯ ತಮ್ಮ ಸ್ವಗ್ರಾಮದಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೆಬಲ್ ಪ್ರಕಾಶ್ ಗೋವಿಂದ್ ಕಪಾಡೆ(39) ಅವರು ಇಂದು ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಕಪಾಡೆ ಅವರು ಕಳೆದ ವಾರ ಕುಟುಂಬ ಸಮೇತ ತಮ್ಮ ಊರಾದ ಜಾಮ್ನೇರ್‌ಗೆ ತೆರಳಿದ್ದರು.
ಪ್ರಾಥಮಿಕ ತನಿಖೆಯ ಪ್ರಕಾರ, ಅವರು ಮಧ್ಯರಾತ್ರಿ 1.30 ರ ಸುಮಾರಿಗೆ ಎದ್ದು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗುಂಡೇಟಿನ ಸದ್ದು ಕೇಳಿ ಎಚ್ಚರಗೊಂಡ ಮನೆಯಲ್ಲಿದ್ದ ಇತರರು ತಕ್ಷಣ ಅವರ ಬಳಿಗೆ ಬಂದಿದ್ದು, ಕಪಾಡೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ.
ಕಪಾಡೆ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆ ಬಳಿಕ ಜಾಮ್ನೇರ್ ಪೊಲೀಸರ ತಂಡ ಕಪಾಡೆ ಮನೆಗೆ ಭೇಟಿ ನೀಡಿದ್ದು, ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
Advertisement