
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 'ಮೋದಿ ಕಿ ಗ್ಯಾರಂಟಿ' ನೆಲಕಚ್ಚಿದೆ ಮತ್ತು '400 ಪಾರ್' 'ಮೌನ ಸಮಾಧಿ'ಯಾಗಿರುವುದರಿಂದ 'ಹೊರಹೋಗುವ ಪ್ರಧಾನಿ'ಗೆ ಹಿಂದೂ-ಮುಸ್ಲಿಂ ರಾಜಕೀಯವನ್ನು ಹೊರತುಪಡಿಸಿ ಬೇರೆ ಯಾವುದೇ ಅಜೆಂಡಾ ಇಲ್ಲ ಎಂದು ಬುಧವಾರ ಆರೋಪಿಸಿದೆ.
ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು, ನಾನು ಹಿಂದೂ-ಮುಸ್ಲಿಂ ಭೇದ ಮಾಡಿದ ದಿನದಿಂದ ಸಾರ್ವಜನಿಕ ಜೀವನದಲ್ಲಿ ಮುಂದುವರಿಯಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ವಿರೋಧ ಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಾಗುತ್ತದೆ ಎಂಬರ್ಥದ ಹೇಳಿಕೆ ನೀಡಿದ್ದ ಮೋದಿಯವರು, ತಾನೆಂದೂ ನಿರ್ದಿಷ್ಟವಾಗಿ ಮುಸ್ಲಿಮರನ್ನು ಉಲ್ಲೇಖಿಸಿಲ್ಲ ಎಂದಿದ್ದಾರೆ.
ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಹೊರಹೋಗುವ ಪ್ರಧಾನಿ ಎಷ್ಟು ದೊಡ್ಡ ಸುಳ್ಳುಗಾರ' ಎಂಬುದು ದೇಶಕ್ಕೆ ಚೆನ್ನಾಗಿ ತಿಳಿದಿದೆ. ತಾವು ಹಿಂದೂ-ಮುಸ್ಲಿಂ ವಿಚಾರವಾಗಿ ರಾಜಕೀಯ ಮಾಡುವುದಿಲ್ಲ ಎಂಬ ಮೋದಿಯವರ ಇತ್ತೀಚಿನ ಹೇಳಿಕೆಯು ಅವರು ಸುಳ್ಳು ಹೇಳುವಲ್ಲಿ ಪ್ರತಿದಿನ ತಲುಪುವ ಹೊಸ ಆಳ ಎಷ್ಟು ಎಂಬುದನ್ನು ತೋರಿಸಿದೆ. ಏಪ್ರಿಲ್ 19, 2024 ರಿಂದ ಇದು ಸಾರ್ವಜನಿಕ ದಾಖಲೆಯ ವಿಷಯವಾಗಿದ್ದು, ಅದನ್ನು ಅಳಿಸಲು ಸಾಧ್ಯವಿಲ್ಲ. ಮೋದಿಯವರು ಅವರ ಸ್ಮರಣೆಯಿಂದ ಅಳಿಸಿದರೂ ಸಹ ನಿರ್ಗಮಿಸುತ್ತಿರುವ ಪ್ರಧಾನಿಯು ಸ್ಪಷ್ಟವಾಗಿ ಮತ್ತು ನಿರ್ಲಜ್ಜವಾಗಿ ಕೋಮು ಭಾಷೆ, ಚಿಹ್ನೆಗಳು ಮತ್ತು ಪ್ರಸ್ತಾಪಗಳನ್ನು ಬಳಸಿದ್ದಾರೆ' ಎಂದು ಎಕ್ಸ್‌ನಲ್ಲಿ ಆರೋಪಿಸಿದ್ದಾರೆ.
ಇದನ್ನು ಭಾರತದ ಚುನಾವಣಾ ಆಯೋಗದ ಗಮನಕ್ಕೂ ತಂದಿದ್ದೇವೆ. ಆಯೋಗ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆಯ ಪ್ರಚಾರದ ಉದ್ದಕ್ಕೂ, 'ಹೊರಹೋಗುವ ಪ್ರಧಾನಿ' ಹಿಂದೂ-ಮುಸ್ಲಿಂ ರಾಜಕೀಯವನ್ನು ಹೊರತುಪಡಿಸಿ ಬೇರೆ ಯಾವುದೇ ಅಜೆಂಡಾವನ್ನು ಹೊಂದಿಲ್ಲ ಎಂದು ರಮೇಶ್ ದೂರಿದರು.
ಅವರ (ಬಿಜೆಪಿ) ಪಕ್ಷದ ಚುನಾವಣಾ ಪ್ರಣಾಳಿಕೆಯು ಕಳಪೆಯಾಗಿದೆ ಮತ್ತು ವಸ್ತುನಿಷ್ಠತೆಯ ಕೊರತೆಯನ್ನು ಸೂಚಿಸುತ್ತದೆ. ಹೆಚ್ಚುವರಿಯಾಗಿ, ಪ್ರಣಾಳಿಕೆಯು ಕೇವಲ ಪ್ರಧಾನಿ ಮೋದಿಯವರ ಫೋಟೋಗಳಿಂದ ತುಂಬಿದೆ. ಕಳೆದ ಕೆಲವು ತಿಂಗಳುಗಳಿಂದ ಸಾರ್ವಜನಿಕ ಖಜಾನೆಗೆ ಭಾರಿ ವೆಚ್ಚದಲ್ಲಿ ಪ್ರಚಾರ ಮಾಡಲಾದ ಮೋದಿ ಕಿ ಗ್ಯಾರಂಟಿ ನೆಲಸಮವಾಗಿದೆ. 400 ಪಾರ್ ಅನ್ನು ಮೌನವಾಗಿ ಸಮಾಧಿ ಮಾಡಲಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬ ಭಾರತೀಯ ನಾಗರಿಕನ ಸಮಾನ ಬೆಳವಣಿಗೆಗಾಗಿ ಕಾಂಗ್ರೆಸ್ ಪಕ್ಷದ ಮತ್ತು ಇಂಡಿಯಾ ಮೈತ್ರಿಕೂಟದ ಕಾರ್ಯಸೂಚಿಯ ಬಗ್ಗೆ ಸುಳ್ಳುಗಳನ್ನು ಹರಡುವುದು ಅವರ ಕೊನೆಯ ಹತಾಶ ಪ್ರಯತ್ನವಾಗಿದೆ. ಅವರ ನಿರ್ಗಮನದ ಖಚಿತತೆಯು ಈಗ ಅವರು ಕೆಲವು ವಿಷಯಗಳನ್ನು ಮರತಂತೆ ನಟಿಸುವಂತೆ ಮಾಡಿದೆ ಎಂದು ರಮೇಶ್ ಹೇಳಿದ್ದಾರೆ.
Advertisement