
ಲಖನೌ(ಉತ್ತರಪ್ರದೇಶ): ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಸಿಎಂ ನಿವಾಸದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ವಿಭವ್ ಕುಮಾರ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ವಿಷಯ ಹೊರಬರುತ್ತಿದ್ದಂತೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪಕ್ಷದ ನಾಯಕ ಸಂಜಯ್ ಸಿಂಗ್ ಹೇಳಿದ್ದರು. ಆದರೆ ಇದೀಗ ಲಖನೌದ ವಿಮಾನ ನಿಲ್ದಾಣದಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಜೊತೆ ವಿಭವ್ ಕುಮಾರ್ ಕಾಣಿಸಿಕೊಂಡಿರುವುದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.
ಇಂಡಿಯಾ ಮೈತ್ರಿಕೂಟ ನಾಯಕರ ಜಂಟಿ ಪತ್ರಿಕಾಗೋಷ್ಠಿ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಸ್ತುತ ಲಖನೌದಲ್ಲಿದ್ದಾರೆ. ಕೇಜ್ರಿವಾಲ್ ಇಂದು ಬೆಳಗ್ಗೆ ಲಖನೌದ ವಿಮಾನ ನಿಲ್ದಾಣದಲ್ಲಿ ಪಕ್ಷದ ನಾಯಕರಾದ ಸಂಜಯ್ ಸಿಂಗ್ ಮತ್ತು ವಿಭವ್ ಕುಮಾರ್ ಅವರೊಂದಿಗೆ ಕಾಣಿಸಿಕೊಂಡರು. ಲಖನೌ ವಿಮಾನ ನಿಲ್ದಾಣದಲ್ಲಿ ಕೇಜ್ರಿವಾಲ್ ಅವರೊಂದಿಗೆ ವಿಭವ್ ಕುಮಾರ್ ಇರುವ ಚಿತ್ರಗಳು ವೈರಲ್ ಆದ ನಂತರ ಚರ್ಚೆಗಳು ತೀವ್ರಗೊಂಡಿದೆ.
ಏತನ್ಮಧ್ಯೆ, ಸ್ವಾತಿ ಮಲಿವಾಲ್ ಪ್ರಕರಣದ ಕುರಿತು ವರದಿಗಾರರೊಬ್ಬರು ಅರವಿಂದ್ ಕೇಜ್ರಿವಾಲ್ ರನ್ನು ಪ್ರಶ್ನಿಸಿದರು. ಈ ವೇಳೆ ಈ ಪ್ರಶ್ನೆಗೆ ಕೇಜ್ರಿವಾಲ್ ಯಾವುದೇ ಉತ್ತರವನ್ನು ನೀಡದೆ ನುಣುಚಿಕೊಂಡಿದ್ದಾರೆ.
ಪ್ರಕರಣದ ಬಗ್ಗೆ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ತಜೀಂದರ್ ಬಗ್ಗಾ ಅವರು ಸ್ವಾತಿ ಮಲಿವಾಲ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ವಿಭವ್ ಕುಮಾರ್ ಅವರನ್ನು ಯಾವಾಗ ಶಿಕ್ಷಿಸುತ್ತಾರೆ ಎಂದು ಕೇಜ್ರಿವಾಲ್ ರನ್ನು ಪ್ರಶ್ನಿಸಿದ್ದಾರೆ. ಮಹಿಳಾ ಸಂಸದರ ಮೇಲೆ ಹಲ್ಲೆ ನಡೆಸಿದ ವಿಭವ್ ಕುಮಾರ್‌ಗೆ ಅರವಿಂದ್ ಕೇಜ್ರಿವಾಲ್ ಕಠಿಣ ಶಿಕ್ಷೆ ನೀಡಿದ್ದಾರೆ ಎಂದು ಸಂಜಯ್ ಸಿಂಗ್ ಹೇಳಿದ್ದರು. ಆದರೆ ಇಂದು ಅವರ ಜೊತೆ ನೀವು ಇಡೀ ದೇಶವನ್ನು ಸುತ್ತಲು ಪ್ರಾರಂಭಿಸಿದ್ದೀರಿ ಎಂದು ಬಗ್ಗಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement