ಕೊಚ್ಚಿನ್: ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ದೇವರನಾಡು ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಶನಿವಾರ ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಹೌದು.. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕೇರಳದಲ್ಲಿ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದ್ದು, ಮೇ 19 ಮತ್ತು 20 ರಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಕೇರಳದ ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಈ ಭಾಗದಲ್ಲಿ ಮೇ 19 ಮತ್ತು 20 ಭಾರಿ ಮಳೆಯಾಗಲಿದೆ ಎಂದು ಹೇಳಿದೆ.
ಅಂತೆಯೇ ರಾಜಧಾನಿ ತಿರುವನಂತಪುರಂ, ಕೊಲ್ಲಂ, ಅಲಪ್ಪುಳ ಮತ್ತು ಎರ್ನಾಕುಲಂನಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದ್ದು, ಮೇ 21 ಕ್ಕೆ ಒಂಬತ್ತು ಜಿಲ್ಲೆಗಳಲ್ಲಿ ಕಿತ್ತಳೆ ಎಚ್ಚರಿಕೆಯನ್ನು ನೀಡಿದೆ. ಅವುಗಳಲ್ಲಿ ಕೆಲವು ರೆಡ್ ಅಲರ್ಟ್‌ನಂತೆಯೇ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಮೇ 19 ಮತ್ತು 22 ರ ನಡುವೆ ಕೇರಳದ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು-ಮಿಂಚು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ಮುನ್ಸೂಚನೆ ನೀಡಿದೆ.
ಈ ಪ್ರದೇಶದಲ್ಲಿ ಪ್ರಬಲವಾದ ಪಶ್ಚಿಮ ಮತ್ತು ನೈಋತ್ಯ ಮಾರುತಗಳ ಹರಡುವಿಕೆಯಿಂದಾಗಿ ಮೇ 18 ಮತ್ತು 20 ರ ನಡುವೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು IMD ಗುರುವಾರ ಮುನ್ಸೂಚನೆ ನೀಡಿದೆ.
ಶನಿವಾರ ಪತ್ತನಂತಿಟ್ಟ, ಇಡುಕ್ಕಿ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರೆಡ್ ಅಲರ್ಟ್ ಘೋಷಣೆ ಮುಂದಿನ 24 ಗಂಟೆಗಳಲ್ಲಿ 20 ಸೆಂ.ಮೀ ಗಿಂತ ಹೆಚ್ಚಿನ ಭಾರೀ ಮಳೆಯನ್ನು ಸೂಚಿಸುತ್ತದೆ. ಆದರೆ ಆರೆಂಜ್ ಅಲರ್ಟ್ ಎಂದರೆ ಅತಿ ಭಾರೀ ಮಳೆ (6 ಸೆಂ.ಮೀ ನಿಂದ 20 ಸೆಂ.ಮೀ.). ಯೆಲ್ಲೋ ಅಲರ್ಟ್ ಎಂದರೆ 6 ರಿಂದ 11 ಸೆಂ.ಮೀ ನಡುವೆ ಭಾರೀ ಮಳೆಯಾಗುತ್ತದೆ ಎಂದು ಐಎಂಡಿ ಮಾಹಿತಿ ನೀಡಿದೆ.
Advertisement