
ಲಖನೌ: ಎಸ್‌ಪಿ ಮತ್ತು ಕಾಂಗ್ರೆಸ್, ನಮ್ಮ ಸರ್ಕಾರ ನಿರ್ಮಿಸಿದ ಮನೆಗಳನ್ನು ಕಸಿದುಕೊಳ್ಳಲಿದೆ, ಜನರ ಜನ್‌ಧನ್ ಖಾತೆಗಳನ್ನು ಮುಚ್ಚಲಿದೆ, ಅವರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಿದೆ ಮತ್ತು ನೀರಿನ ನಲ್ಲಿಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಆರೋಪಿಸಿದ್ದಾರೆ.
"ಇಂಡಿಯಾ ಮೈತ್ರಿಕೂಟ" ಕ್ಯಾನ್ಸರ್‌ಗಿಂತಲೂ ಕೆಟ್ಟ ಕಾಯಿಲೆ ಎಂದು ಟೀಕಿಸಿದ ಮೋದಿ, "ಇಂಡಿಯಾ ಮೈತ್ರಿಕೂಟ" ಪಕ್ಷಗಳು ಕೋಮುವಾದಿ, ಜಾತಿವಾದಿ ಮತ್ತು ಕುಟುಂಬ ಕೇಂದ್ರಿತವಾಗಿವೆ. ಇವು ಕ್ಯಾನ್ಸರ್‌ಗಿಂತ ಕೆಟ್ಟದಾಗಿವೆ” ಎಂದು ವಾಗ್ದಾಳಿ ನಡೆಸಿದರು.
ಇಂದು ಉತ್ತರ ಪ್ರದೇಶದ ಶ್ರಾವಸ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕೇತ್ ಮಿಶ್ರಾ ಪರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, "ಕಳೆದ 60 ವರ್ಷಗಳಲ್ಲಿ ನೀವು ಏನು ಮಾಡಿದ್ದೀರಿ ಎಂದು ಜನರು ಕೇಳಿದಾಗ, ಅವರು ಸಮಾಜವನ್ನು ವಿಭಜಿಸಲು ಮತ್ತು ವೋಟ್ ಜಿಹಾದ್ ಮಾಡುತ್ತಾರೆ" ಎಂದರು.
ಇಂಡಿಯಾ ಬ್ಲಾಕ್ ಪಕ್ಷಗಳು ತುಷ್ಟೀಕರಣ ರಾಜಕೀಯದಲ್ಲಿ ತೊಡಗಿವೆ ಎಂದು ಆರೋಪಿಸಿದ ಮೋದಿ, "ಕಾಂಗ್ರೆಸ್, ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳುತ್ತಿದೆ. ಆದರೆ ದೇಶದ ಬಡವರಿಗೆ ಆಸ್ತಿಯಲ್ಲಿ ಮೊದಲ ಹಕ್ಕು ಇದೆ ಎಂದು ಮೋದಿ ಹೇಳುತ್ತಾರೆ" ಎಂದರು.
ನಿಮ್ಮ ಗಳಿಕೆಯನ್ನು ಕಿತ್ತುಕೊಂಡು ವೋಟ್ ಜಿಹಾದ್‌ನಲ್ಲಿ ತೊಡಗಿರುವ ಕಾಂಗ್ರೆಸ್, ತನ್ನ ವೋಟ್ ಬ್ಯಾಂಕ್‌ಗೆ ನೀಡಲು ಬಯಸುತ್ತಿದೆ. "ಕಳೆದ 10 ವರ್ಷಗಳಲ್ಲಿ ಮೋದಿ ನಾಲ್ಕು ಕೋಟಿ ಬಡವರಿಗೆ ಶಾಶ್ವತ ಮನೆಗಳನ್ನು ನೀಡಿದರು, ಈಗ ಎಸ್‌ಪಿ ಮತ್ತು ಕಾಂಗ್ರೆಸ್ ಎಲ್ಲವನ್ನೂ ಕಸಿದುಕೊಳ್ಳಲು ನಿರ್ಧರಿಸಿವೆ. ಅಂದರೆ ಅವರು ನಿಮ್ಮಿಂದ ನಾಲ್ಕು ಕೋಟಿ ಮನೆಗಳ ಕೀಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವುಗಳನ್ನು ತಮ್ಮ ವೋಟ್ ಬ್ಯಾಂಕ್(ಮುಸ್ಲಿಮರಿಗೆ)ಗೆ ಕೊಡುತ್ತಾರೆ ಎಂದು ಆರೋಪಿಸಿದರು.
Advertisement