ಮತದಾನ ಪ್ರಮಾಣ ಘೋಷಣೆ ವಿಳಂಬಕ್ಕೆ ವಿಪಕ್ಷಗಳ ಆಕ್ರೋಶ; ದತ್ತಾಂಶ ನೀಡಿದ್ರೆ ದುರ್ಬಳಕೆ ಎಂದ Election Commission

ಹಾಲಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಘೋಷಣೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದು, ಚುನಾವಣಾ ಆಯೋಗ ಕೂಡ ಸ್ಪಷ್ಟನೆ ನೀಡಿದೆ.
Election Commission
ಮತದಾನ ಪ್ರಮಾಣ ಘೋಷಣೆ ವಿಳಂಬ (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ಹಾಲಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಘೋಷಣೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದು, ಚುನಾವಣಾ ಆಯೋಗ ಕೂಡ ಸ್ಪಷ್ಟನೆ ನೀಡಿದೆ.

ಹೌದು..ಲೋಕಸಭಾ ಚುನಾವಣೆಯ (Lok Sabha Election) ವಿವಿಧ ಹಂತಗಳಲ್ಲಿ ಆಗುತ್ತಿರುವ ಮತದಾನ (Vote) ಪ್ರಮಾಣವನ್ನು ಚುನಾವಣಾ ಆಯೋಗ (Election Commission) ಸಕಾಲಕ್ಕೆ ನೀಡದಿರುವುದಕ್ಕೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗುತ್ತಿದೆ.

ಆರಂಭಿಕ ಮತ್ತು ಅಂತಿಮ ಹಂತದಲ್ಲಿ ನೀಡಲಾದ ದತ್ತಾಂಶಗಳ ವ್ಯತ್ಯಾಸ 1.7 ಕೋಟಿ ಎಂದು ಕಾಂಗ್ರೆಸ್ (Congress) ಆರೋಪಿಸಿ ಕಳವಳ ವ್ಯಕ್ತಪಡಿಸಿದೆ. ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಫಾರ್ಮ್ 17 ಅನ್ನು ಅಪ್‌ಲೋಡ್ ಮಾಡುವ ಮೂಲಕ ಸಾರ್ವಜನಿಕ ಡೊಮೇನ್‌ನಲ್ಲಿ ನಿರ್ವಿವಾದದ ಮತದಾನದ ಅಂಕಿಅಂಶಗಳನ್ನು ಇರಿಸುವಲ್ಲಿ ವಿಳಂಬ ಮಾಡುತ್ತಿರುವುದರಿಂದ ಮತದಾನದ ಅಂಕಿಅಂಶಗಳ ದೃಢೀಕರಣ ಮತ್ತು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಅನುಮಾನಗಳು ಮತ್ತು ಚರ್ಚೆಗಳನ್ನು ಅನಗತ್ಯವಾಗಿ ವಿಸ್ತರಿಸುತ್ತಿದೆ.

ಆಯೋಗ ತನ್ನ ಡೇಟಾದ ಸಮಗ್ರತೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲವನ್ನೂ ಮಾಡಬೇಕಾಗಿದೆ.

Election Commission
ಚುನಾವಣೆಯಾದ 11 ದಿನಗಳ ನಂತರ ಮತದಾನ ಪ್ರಮಾಣ ಬಿಡುಗಡೆ: ಇಸಿ ವಿಶ್ವಾಸಾರ್ಹತೆ ಬಗ್ಗೆ ಕಪಿಲ್ ಸಿಬಲ್ ಕಳವಳ!

ಈ ಹಿಂದೆ ಆಯೋಗ ಮೊದಲ ಹಂತದ ಮತದಾನದ ನಂತರ ಅದರ ಅಂತಿಮ ದತ್ತಾಂಶ ಘೋಷಣೆಗೆ 11 ದಿನಗಳನ್ನು ತೆಗೆದುಕೊಂಡಿತ್ತು. ಅಂತೆಯೇ ಎರಡನೇ ಹಂತದ ಮತದಾನ ನಡೆದ ನಾಲ್ಕು ದಿನಗಳ ಬಳಿಕ ಅದರ ಅಂತಿಮ ಮತದಾನ ಪ್ರಮಾಣ ಘೋಷಣೆ ಮಾಡಿತ್ತು. ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ದತ್ತಾಂಶ ಘೋಷಣೆಯಲ್ಲಿ ಇಷ್ಟು ವಿಳಂಬ ಮಾಡುತ್ತಿದ್ದು, ಹಿಂದಿನ ಚುನಾವಣೆಗಳಲ್ಲಿ ಮತದಾನದ 24 ಗಂಟೆಗಳಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾದ ಅಂತಿಮ ಅಂಕಿಅಂಶಗಳನ್ನು ಪ್ರಕಟಿಸುತ್ತಿತ್ತು.

ಆದರೆ ಆಗ ಇಲ್ಲದ ವಿಳಂಬ ಈಗ ಏಕೆ..? ಅಲ್ಲದೆ ಅಂತಿಮ ಅಂಕಿ ಅಂಶವು ಮತದಾನದ ದಿನಗಳ ಕೊನೆಯಲ್ಲಿ ಆಯೋಗವು ಘೋಷಿಸಿದ ಮತದಾನದ ಶೇಕಡಾವಾರು ಶೇಕಡಾ 5 ಕ್ಕಿಂತ ಹೆಚ್ಚು ತೀವ್ರ ಹೆಚ್ಚಳವನ್ನು ತೋರಿಸಿದೆ. ಇದು ಆಯೋಗದ ಮೇಲಿನ ಒತ್ತಡವೋ ಅಥವಾ ಚುನಾವಣೆಯಲ್ಲಿ ಗೆಲುವಿಗಾಗಿ ನಡೆಯುತ್ತಿರುವ ಪಿತೂರಿಯೋ? ಎಂದು ವಿರೋಧ ಪಕ್ಷಗಳು ಪ್ರಶ್ನಿಸಿವೆ.

ಅಲ್ಲದೆ ಪ್ರತಿ ಸಂಸದೀಯ ಕ್ಷೇತ್ರದಲ್ಲಿ ನೋಂದಾಯಿತ ಮತದಾರರ ಒಟ್ಟು ಸಂಖ್ಯೆಯ ದತ್ತಾಂಶ ಆಯೋಗದ ವೆಬ್‌ಸೈಟ್‌ನಲ್ಲಿ ಏಕೆ ಲಭ್ಯವಾಗಲಿಲ್ಲ ಎಂಬ ಪ್ರಶ್ನೆಗಳನ್ನು ಸಹ ಎತ್ತಲಾಗಿದೆ. ಒಂದು ಕ್ಷೇತ್ರದಲ್ಲಿ ಒಟ್ಟು ನೋಂದಾಯಿತ ಮತದಾರರ ಸಂಖ್ಯೆಯನ್ನು ಬಹಿರಂಗಪಡಿಸದೆ ಆಯೋಗವು ನೀಡಿರುವ ಮತದಾನದ ಶೇಕಡಾವಾರು ಅರ್ಥಹೀನ ಎಂದು ವಿರೋಧ ಪಕ್ಷಗಳು ಕಿಡಿಕಾರಿದ್ದು, ಇವು ಆಯೋಗವು ಪರಿಹರಿಸಬೇಕಾದ ಕಾಳಜಿಯ ಅಂಶಗಳಾಗಿವೆ ಎಂದು ಹೇಳಿದೆ.

ಮತಗಟ್ಟೆವಾರು ದತ್ತಾಂಶ ನೀಡಿದ್ರೆ ದುರ್ಬಳಕೆ

ಈ ವಿಚಾರವಾಗಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ ಸಂಸ್ಥೆ (ADR) ಸುಪ್ರೀಂಕೋರ್ಟ್ (Supreme Court) ಮೊರೆ ಹೋಗಿದ್ದು ಇದಕ್ಕೆ ಕೇಂದ್ರ ಚುನಾವಣಾ ಆಯೋಗ ಕೂಡ ಸ್ಪಂದಿಸಿದೆ. ಚುನಾವಣೆ ನಡೆಯುತ್ತಿರುವ ಸಮಯದಲ್ಲಿ ಮತಗಟ್ಟೆವಾರು ಮತದಾನ ಪ್ರಮಾಣವನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿದರೆ ಅದು ಗೊಂದಲ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ ಎನ್ನುತ್ತಾ 225 ಪುಟಗಳ ಅಫಿಡವಿಟ್ ದಾಖಲಿಸಿದೆ.

ಪ್ರತಿ ಮತಗಟ್ಟೆಯಲ್ಲಿ ಬಿದ್ದ ಮತಗಳ ಸಂಖ್ಯೆಯನ್ನು ತಿಳಿಸುವ ಫಾರಂ 17ಸಿ ಪತ್ರವನ್ನು ಬಹಿರಂಗ ಮಾಡುವಂತೆ ಎಲ್ಲಿಯೂ ನಿಯಮಗಳಿಲ್ಲ. ಸದ್ಯ ಈ 17ಸಿ ಮೂಲ ಫಾರಂಗಳನ್ನು ಸ್ಟ್ರಾಂಗ್‌ ರೂಂನಲ್ಲಿ ಇಡಲಾಗಿದೆ. ಕೇವಲ ಮತಗಟ್ಟೆ ಏಜೆಂಟ್‌ಗೆ ಇದರ ಕಾಪಿಯನ್ನು ಪಡೆಯಲು ಅನುಮತಿ ಇದೆ. ಅರ್ಜಿದಾರ ಕೋರಿದಂತೆ ಮತಗಟ್ಟೆವಾರು ಪೋಲಿಂಗ್ ಪ್ರಮಾಣವನ್ನು ಬಹಿರಂಗಪಡಿಸಿದರೆ ಅದು ದುರ್ಬಳಕೆ ಆಗುವ ಸಂಭವ ಇದೆ ಎಂದು ತಿಳಿಸಿದೆ.

ಮಾರ್ಫಿಂಗ್ ಅಪಾಯ

ಅಂತೆಯೇ ದತ್ತಾಂಶವನ್ನು ಮಾರ್ಫಿಂಗ್ ಮಾಡುವ ಸಂಭವ ಇದೆ ಎಂದು ಆರೋಪಿಸಿರುವ ಆಯೋಗ ಇದರಿಂದ ಗೊಂದಲ ಉಂಟಾಗಿ ಇಡೀ ಚುನಾವಣೆ ಪ್ರಕ್ರಿಯೆ ಮೇಲೆ ಜನರಲ್ಲಿ ಅಪನಂಬಿಕೆ ಮೂಡಬಹದು ಎಂಬ ಆತಂಕವನ್ನು ಆಯೋಗ ವ್ಯಕ್ತಪಡಿಸಿದೆ. ಮತದಾನ ಪ್ರಮಾಣದಲ್ಲಿ ವ್ಯತ್ಯಾಸಗಳು ಕಂಡುಬಂದಿವೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಆಯೋಗ ಎಲ್ಲಿಯೂ ಲೋಪ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಶುಕ್ರವಾರವೂ ಈ ಅರ್ಜಿಯ ವಿಚಾರಣೆ ನಡೆಯಲಿದೆ. ಐದನೇ ಹಂತದ ಅಂತಿಮ ಮತದಾನ ಪ್ರಮಾಣ 62.2% ರಷ್ಟು ದಾಖಲಾಗಿದೆ ಎಂದು ಆಯೋಗ ಪ್ರಕಟಿಸಿದೆ.

Election Commission
ಬೆಂಗಳೂರು: ಮತದಾನ ಪ್ರಮಾಣ ಹೆಚ್ಚಳಕ್ಕೆ ಬೆಣ್ಣೆ ದೋಸೆ, ಫಿಲ್ಟರ್ ಕಾಫಿ, ಬಿಯರ್ ಆಫರ್!

ಏನಿದು ಅರ್ಜಿ?

ಪ್ರತಿ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ನಿಖರವಾದ ಸಂಖ್ಯೆಯನ್ನು ಫಾರ್ಮ್ 17ಸಿ ಭಾಗ 1 ಮೂಲಕ ಸ್ಪರ್ಧಾತ್ಮಕ ಅಭ್ಯರ್ಥಿಗಳಿಗೆ ಅಥವಾ ಅವರ ಪೋಲಿಂಗ್ ಏಜೆಂಟ್‌ಗಳಿಗೆ ಲಭ್ಯವಾಗುವಂತೆ ಮಾಡುತ್ತದೆ, ಇದರಲ್ಲಿ ಒಂದು ಕೇಂದ್ರ ಅಥವಾ ಮತಗಟ್ಟಿಯಲ್ಲಿ ಚಲಾವಣೆಯಾದ ಎಲ್ಲಾ ಮತಗಳನ್ನು ದಾಖಲಿಸಲಾಗುತ್ತದೆ.

ಫಾರ್ಮ್ 17ಸಿ ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಫಾರ್ಮ್ 17C ಅನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಾಕುವುದರಿಂದ ಅದರ ದುರುಪಯೋಗಕ್ಕೆ ಕಾರಣವಾಗಬಹುದು ಮತ್ತು ಒಂದು ಮತಗಟ್ಟೆಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಬಗ್ಗೆ ಗೊಂದಲ ಉಂಟಾಗಬಹುದು ಎಂದು ಆಯೋಗ ಈ ಅರ್ಜಿ ವಿರೋಧಿಸಿದೆ.

ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಮತದಾನದ ಅಂತಿಮ, ದೃಢೀಕೃತ ದತ್ತಾಂಶವನ್ನು ಪ್ರಕಟಿಸುವ ಬಗ್ಗೆ ಯಾವುದೇ ಕಾನೂನು ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದೂ ಹೇಳಿದೆ.

ಇದು ವಿರೋಧ ಪಕ್ಷಗಳು ಮತ್ತು ಸುಧಾರಣಾ ಗುಂಪುಗಳು ಮಾಡುವ ಹಕ್ಕುಗಳ ಕಾನೂನುಬದ್ಧತೆಯ ಬಗ್ಗೆ ಮಾತ್ರವಲ್ಲ. ಇಲ್ಲಿ ವಿಷಯವು ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಹಿಕೆ ಮತ್ತು ಜನರ ನಂಬಿಕೆಯ ಬಗ್ಗೆ ಹೆಚ್ಚು. ಸಾರ್ವಜನಿಕ ಡೊಮೇನ್‌ನಲ್ಲಿ ನಿಖರವಾದ ಮತ್ತು ನಿರ್ವಿವಾದದ ಮತದಾನದ ಅಂಕಿಅಂಶಗಳನ್ನು ಹಾಕುವಲ್ಲಿ ಆಯೋಗವು ಹೆಚ್ಚು ಪಾರದರ್ಶಕತೆ ಮತ್ತು ವೇಗವನ್ನು ತರಬೇಕಾಗಿದೆ ಎಂದು ಸಾರ್ವಜನಿಕ ಸಂಘಟನೆಗಳು ಆಗ್ರಹಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com