
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೊಮ್ಮೆ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಹಾಸ್ಯಮಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. 'ಇದು 'ಕೌನ್ ಬನೇಗಾ ಕರೋಡ್‌ಪತಿ' ಎಂದು ಕೇಳುವಂತಿದೆ' ಎಂದು ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಟಿವಿ ಕಾರ್ಯಕ್ರಮವನ್ನು ಉಲ್ಲೇಖಿಸಿ ಹೇಳಿದ್ದಾರೆ.
ಶಿಮ್ಲಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾವು ಸರ್ಕಾರ ರಚಿಸಿದರೆ, ಪ್ರಧಾನಿ ಯಾರಾಗಬೇಕೆಂದು ಎಲ್ಲ ನಾಯಕರು ನಿರ್ಧರಿಸುತ್ತಾರೆ' ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಚುನಾವಣೆಗೆ ಮೊದಲು ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಪ್ರಸ್ತಾಪಿಸದೆ 2004 ರಿಂದ 2014ರವರೆಗೆ 10 ವರ್ಷಗಳ ಕಾಲ ಸರ್ಕಾರವನ್ನು ನಡೆಸಿದೆ. 2004ರಲ್ಲಿ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸಿದ್ದರು. ಆದರೆ, ಅವರು ನಿರಾಕರಿಸಿದರು. ನಮಗೆ ಬಹುಮತವಿರಲಿಲ್ಲ, ನಮಗೆ 140 ಸ್ಥಾನಗಳಿದ್ದವು. 2009ರಲ್ಲಿ 209 ಸ್ಥಾನಗಳೊಂದಿಗೆ ನಾವು ಅಧಿಕಾರಕ್ಕೆ ಮರಳಿದ್ದೇವೆ. ನಾವು ಯುಪಿಎ ಮೈತ್ರಿಕೂಟ ರಚಿಸಿ 10 ವರ್ಷಗಳವರೆಗೆ ಸರ್ಕಾರ ನಡೆಸಿದ್ದೇವೆ ಎಂದು ಅವರು ಹೇಳಿದರು.
'ಕೆಲವೊಮ್ಮೆ ಬುದ್ಧಿವಂತರು ಸಹ ಇತಿಹಾಸವನ್ನು ಮರೆತುಬಿಡುತ್ತಾರೆ' ಎಂದ 81 ವರ್ಷದ ಖರ್ಗೆ, ಪ್ರಧಾನಿ ಅಭ್ಯರ್ಥಿ ಯಾರೆಂಬುದು ಇಂಡಿಯಾ ಮೈತ್ರಿಕೂಟಕ್ಕೆ ಗೊತ್ತಿಲ್ಲ ಎಂದು ಗುರಿಯಾಗಿಸಿಕೊಂಡ ಆಡಳಿತಾರೂಢ ಬಿಜೆಪಿಯನ್ನು ಗೇಲಿ ಮಾಡಿದರು.
'ಬಿಜೆಪಿ 2014ರಲ್ಲಿ 2 ಕೋಟಿ ಉದ್ಯೋಗಗಳ ಸೃಷ್ಟಿ ಬಗ್ಗೆ ಮಾತನಾಡಿತು, ಹಣದುಬ್ಬರ ಕಡಿಮೆ ಮಾಡುವ ಬಗ್ಗೆ ಮಾತನಾಡಿತು. ಆದರೆ, ಏನೂ ಆಗಲಿಲ್ಲ. ಈ ಬಗ್ಗೆ ಬಿಜೆಪಿ ದೇಶಕ್ಕೆ ಕೇವಲ ಸುಳ್ಳು ಹೇಳಿದೆ. ಪ್ರಧಾನಿ 2014 ಮತ್ತು 2019 ರಲ್ಲಿ ದೊಡ್ಡ ಭರವಸೆಗಳನ್ನು ನೀಡಿದರು. ಆದರೆ, ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ಹಿಮಾಚಲ ಪ್ರದೇಶಕ್ಕೆ ಪ್ರಕೃತಿ ವಿಕೋಪ ಸಂಭವಿಸಿದಾಗ ಅವರು ಸಹಾಯ ಮಾಡಲಿಲ್ಲ. ಬಿಜೆಪಿಯು ದೇಶದಲ್ಲಿ ಸರ್ಕಾರಗಳನ್ನು ಉರುಳಿಸಲು ಕೆಲಸ ಮಾಡುತ್ತಿದೆ ಮತ್ತು ಹಿಮಾಚಲದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದರು.
ಹಿಮಾಚಲ ಪ್ರದೇಶದ ಎಲ್ಲ ನಾಲ್ಕು ಲೋಕಸಭಾ ಸ್ಥಾನಗಳಿಗೆ ಜೂನ್ 1 ರಂದು ಮತದಾನ ನಡೆಯಲಿದೆ. ಜೂನ್ 4 ರಂದು ದೇಶದ ಎಲ್ಲ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.
Advertisement