ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಅರವಿಂದ ಕೇಜ್ರಿವಾಲ್ ಅರ್ಜಿ; ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಿರುವುದರಿಂದ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಅರವಿಂದ ಕೇಜ್ರಿವಾಲ್ - ಸುಪ್ರೀಂ ಕೋರ್ಟ್
ಅರವಿಂದ ಕೇಜ್ರಿವಾಲ್ - ಸುಪ್ರೀಂ ಕೋರ್ಟ್

ನವದೆಹಲಿ: ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಿರುವುದರಿಂದ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಅವರು ಈ ವಿಚಾರದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಪೀಠ ಹೇಳಿದೆ.

ನ್ಯಾಯಮೂರ್ತಿಗಳಾದ ಜೆಕೆ ಮಹೇಶ್ವರಿ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ರಜಾಕಾಲದ ಪೀಠ, ಶುಕ್ರವಾರದವರೆಗೆ ದೆಹಲಿ ಸಿಎಂ ಅರ್ಜಿಯನ್ನು ನ್ಯಾಯಮೂರ್ತಿ ದೀಪಂಕರ್ ದತ್ತಾ ನೇತೃತ್ವದ ರಜಾಕಾಲದ ಪೀಠದ ಮುಂದೆ ಏಕೆ ಸಲ್ಲಿಸಲಿಲ್ಲ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಪ್ರಶ್ನಿಸಿತು.

ಕಳೆದ ತಿಂಗಳು ಎಎಪಿ ನಾಯಕನಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಮುಖ್ಯ ಪೀಠದಲ್ಲಿ ನ್ಯಾಯಮೂರ್ತಿ ದತ್ತಾ ಅವರು ಪ್ರಮುಖರು. ಮೇ 17 ರಂದು ಕೇಜ್ರಿವಾಲ್ ಅವರ ಮುಖ್ಯ ಅರ್ಜಿಯ ತೀರ್ಪನ್ನು ಅದು ಕಾಯ್ದಿರಿಸಿತ್ತು.

ಇಂದಿನ ವಿಚಾರಣೆಯಲ್ಲಿ ವಕೀಲ ಸಿಂಘ್ವಿ ಅವರ ಹೇಳಿಕೆಗಳನ್ನು ಗಮನಿಸಿದ ಪೀಠ, 'ಮುಖ್ಯ ಪ್ರಕರಣದಲ್ಲಿ ತೀರ್ಪು ಕಾಯ್ದಿರಿಸಿರುವುದರಿಂದ ಮಧ್ಯಂತರ ಜಾಮೀನು ವಿಸ್ತರಣೆಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರ ಮನವಿಯನ್ನು ಪಟ್ಟಿ ಮಾಡುವ ಬಗ್ಗೆ ಸಿಜೆಐ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ' ಎಂದಿತು.

ದೆಹಲಿ ಸಿಎಂ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಯಲು ತುರ್ತು ವೈದ್ಯಕೀಯ ತಪಾಸಣೆ ಅಗತ್ಯವಿದ್ದು, ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಸಿಂಘ್ವಿ ಅವರು ಕೋರಿದರು.

ಅರವಿಂದ ಕೇಜ್ರಿವಾಲ್ - ಸುಪ್ರೀಂ ಕೋರ್ಟ್
ಹಣ ಅಕ್ರಮ ವರ್ಗಾವಣೆ ಪ್ರಕರಣ: ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಅರವಿಂದ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೊರೆ

ಪಿಇಟಿ–ಸಿಟಿ ಪರೀಕ್ಷೆ ಸೇರಿದಂತೆ ಕೆಲವು ವೈ ದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕಿರುವುದರಿಂದ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಬೇಕು. ದೇಹದ ತೂಕವು ಇದ್ದಕ್ಕಿದ್ದಂತೆ ಕಡಿಮೆ ಆಗಿದೆ. ಕೀಟೊನ್ ಮಟ್ಟವು ಹೆಚ್ಚಾಗಿದ್ದು, ಇದು ಮೂತ್ರಕೋಶ, ಹೃದಯದ ಸಮಸ್ಯೆ ಅಥವಾ ಕ್ಯಾನ್ಸರ್‌ನ ಸೂಚಕಗಳಿರಬಹುದು. ಹೀಗಾಗಿ ತಮ್ಮ ಮಧ್ಯಂತರ ಜಾಮೀನನ್ನು 7 ದಿನಗಳವರೆಗೆ ವಿಸ್ತರಿಸಬೇಕು ಎಂದು ಕೋರಿ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ಗೆ ಮೇ 26ರಂದು ಅರ್ಜಿ ಸಲ್ಲಿಸಿದ್ದರು.

ತಾವು ಜೂನ್ 2ರ ಬದಲಿಗೆ ಜೂನ್ 9 ರಂದು ಜೈಲು ಅಧಿಕಾರಿಗಳ ಮುಂದೆ ಶರಣಾಗುತ್ತೇನೆ. ಸದ್ಯ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ತಮಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಅನುವು ಮಾಡಿಕೊಡಲು ಸುಪ್ರೀಂ ಕೋರ್ಟ್ ಮೇ 10 ರಂದು 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು.

ಏಳು ಹಂತದ ಚುನಾವಣೆಯ ಕೊನೆಯ ಹಂತದ ಮತದಾನ ಮುಗಿದ ಒಂದು ದಿನದ ನಂತರ ಜೂನ್ 2 ರಂದು ಕೇಜ್ರಿವಾಲ್ ಅವರು ಜೈಲು ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಕೋರ್ಟ್ ನಿರ್ದೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com