
ಪಾಟ್ನಾ: ಬಿಹಾರದಲ್ಲಿ ಬಿಸಿಗಾಳಿಯ ಆರ್ಭಟ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು, ಕೋಚಿಂಗ್ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಜೂನ್ 8 ರವರೆಗೆ ರಜೆ ಘೋಷಣೆ ಮಾಡಿ ಬುಧವಾರ ಆದೇಶಿಸಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸೂಚನೆ ಮೇರೆಗೆ 'ಅಂಗನವಾಡಿ' ಕೇಂದ್ರಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬ್ರಜೇಶ್ ಮೆಹ್ರೋತ್ರಾ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ತಾಪಮಾನ ಹೆಚ್ಚಾದ ಪರಿಣಾಮ ಹಲವಾರು ವಿದ್ಯಾರ್ಥಿಗಳು ಮೂರ್ಛೆ ಹೋಗುತ್ತಿರುವ ವರದಿಗಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿರುವುದರಿಂದ, ಶಾಖದ ಅಲೆಗಳ ಬಿಕ್ಕಟ್ಟನ್ನು ಪರಿಹರಿಸಲು ಸಂಬಂಧಿಸಿದ ಇಲಾಖೆಗಳ ಜೊತೆ ಮೆಹ್ರೋತ್ರಾ ಅವರು ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ಶೇಖ್‌ಪುರ, ಬೇಗುಸರೈ, ಪೂರ್ವ ಚಂಪಾರಣ್ ಮತ್ತು ಇತರ ಪ್ರದೇಶಗಳಲ್ಲಿ ಬಿಸಿಲಿನ ಬೇಗೆಯಿಂದಾಗಿ ವಿದ್ಯಾರ್ಥಿಗಳು ಮೂರ್ಛೆ ಹೋದ ಘಟನೆಗಳು ವರದಿಯಾಗಿವೆ.
ಈ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಜೆಡಿ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಬಿಸಿಗಾಳಿಯಿಂದ ಶಾಲಾ ಮಕ್ಕಳನ್ನು ರಕ್ಷಿಸಲು ಸರ್ಕಾರ ತಕ್ಷಣ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.
Advertisement