ದೆಹಲಿಯಲ್ಲಿ ಮಾರಣಾಂತಿಕ ಗುಂಡಿನ ದಾಳಿ: ಇಬ್ಬರು ಸಾವು, 10 ವರ್ಷದ ಬಾಲಕನಿಗೆ ಗಾಯ
ನವದೆಹಲಿ: ದೆಹಲಿಯ ಶಹದಾರಾದಲ್ಲಿ ತಮ್ಮ ನಿವಾಸದ ಹೊರಗೆ ಇಬ್ಬರು ಗುಂಡಿನ ದಾಳಿ ನಡೆಸಿ 40 ವರ್ಷದ ವ್ಯಕ್ತಿ ಮತ್ತು ಅವರ ಸೋದರಳಿಯ ಮೃತಪಟ್ಟರೆ, 10 ವರ್ಷದ ಮಗ ಗಾಯಗೊಂಡಿರುವ ಘಟನೆ ನಡೆದಿದೆ.
ಘಟನೆಯಲ್ಲಿ ಆಕಾಶ್ ಶರ್ಮಾ ಅಲಿಯಾಸ್ ಚೊಟ್ಟು ಮತ್ತು ಅವರ ಸೋದರಳಿಯ ರಿಷಭ್ ಶರ್ಮಾ (16) ಮೃತಪಟ್ಟಿದ್ದು, ಕ್ರಿಶ್ ಶರ್ಮಾ (10) ಗಾಯಗೊಂಡಿದ್ದಾನೆ. ಈ ಮೂವರು ದೆಹಲಿಯ ಶಹದಾರದ ಫಾರ್ಷ್ ಬಜಾರ್ ಪ್ರದೇಶದಲ್ಲಿ ತಮ್ಮ ಮನೆಯ ಹೊರಗೆ ದೀಪಾವಳಿ ಆಚರಿಸುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಅವರ ಮೇಲೆ ದಾಳಿ ನಡೆಸಲಾಯಿತು.
ರಾತ್ರಿ 8:30 ರ ಸುಮಾರಿಗೆ ಪಿಸಿಆರ್ ಕರೆ ಬಂದ ನಂತರ ಪೊಲೀಸ್ ತಂಡವನ್ನು ಕಳುಹಿಸಲಾಯಿತು. ಸ್ಥಳಕ್ಕೆ ಬಂದು ನೋಡಿದಾಗ ರಕ್ತದೋಕುಳಿ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಕೋರರು ಆಕಾಶ್ ಶರ್ಮಾ ಅವರ ಮೇಲೆ ಗುಂಡು ಹಾರಿಸುವ ಮೊದಲು ಅವರ ಪಾದಗಳನ್ನು ಮುಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಸಂತ್ರಸ್ತರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಪಕ್ಕದಲ್ಲಿ ನಿಂತಿದ್ದ ಆಕಾಶ್ ಶರ್ಮಾ ಅವರ ಪುತ್ರ ಕ್ರಿಶ್ ಮತ್ತು ಸೋದರಳಿಯ ರಿಷಭ್ ಅವರ ಮೇಲೂ ಗುಂಡುಗಳು ತಗುಲಿವೆ. ಬಾಲಕ ಕ್ರಿಶ್ ಶರ್ಮಾ ಚಿಕಿತ್ಸೆ ಪಡೆಯುತ್ತಿದ್ದು, ಆಕಾಶ್ ಶರ್ಮಾ ಮತ್ತು ರಿಷಬ್ ಶರ್ಮಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೇಲ್ನೋಟಕ್ಕೆ ಇದು ವೈಯಕ್ತಿಕ ದ್ವೇಷದ ಪ್ರಕರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಂತ್ರಸ್ತರ ಕುಟುಂಬದ ಸದಸ್ಯರ ಹೇಳಿಕೆಗಳನ್ನು ದಾಖಲಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ