ಅಹಲ್ಯಾನಗರ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಅಕ್ರಮ ಪತ್ತೆ ಹಾಗೂ ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಾರ್ಯಪ್ರವೃತ್ತವಾಗಿದೆ. ಆಯೋಗದ ಜಾಗೃತಿ ದಳ (ಎಸ್‌ಎಸ್‌ಟಿ) ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಟೋಲ್ ಬೂತ್ ಬಳಿ ಸುಮಾರು 24 ಕೋಟಿ ರೂ. ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಸುಪಾ ಟೋಲ್ ಪ್ಲಾಜಾ ಬಳಿ ಗುರುವಾರ ಬೆಳಗ್ಗೆ ಭಾರಿ ಮೊತ್ತದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ನವೆಂಬರ್ 20 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರದಾದ್ಯಂತ ಎಸ್‌ಎಸ್‌ಟಿಗಳನ್ನು ನಿಯೋಜಿಸಲಾಗಿದೆ. ಮೂವರು ಪ್ರಯಾಣಿಸುತ್ತಿದ್ದ ವಾಹನದಿಂದ ವಜ್ರ, ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ದಕ್ಷಿಣ ಮುಂಬೈನ ಝವೇರಿ ಬಜಾರ್‌ನಿಂದ ತೆರಳುತ್ತಿದ್ದರು ಎಂದು ಸುಪಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅರುಣ್ ಅವಹದ್ ತಿಳಿಸಿದ್ದಾರೆ.
ಚಿನ್ನಾಭರಣ ಕುರಿತು ರಶೀದಿ ತೋರಿಸಲು SST ತಂಡ ಕೇಳಿದೆ. ತದನಂತರ ಅವರು ಕೆಲವು ರಶೀದಿಗಳನ್ನು ತೋರಿಸಿದ್ದಾರೆ. ಆದರೆ ಅದರಲ್ಲಿ ನಮೂದಿಸಲಾದ ಮೊತ್ತವು ತಾಳೆಯಾಗುತ್ತಿರಲಿಲ್ಲ. ಬಳಿಕ ಎಸ್‌ಎಸ್‌ಟಿ ಆಭರಣಗಳನ್ನು ವಶಪಡಿಸಿಕೊಂಡಿದೆ ಮತ್ತು ಆದಾಯ ತೆರಿಗೆ ಇಲಾಖೆಗೆ ವಿಷಯವನ್ನು ವರದಿ ಮಾಡಿದೆ. ಛತ್ರಪತಿ ಸಂಭಾಜಿನಗರ, ಅಹಲ್ಯಾನಗರ ಮತ್ತು ಜಲಗಾಂವ್ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಆಭರಣಗಳನ್ನು ತಲುಪಿಸಲು ಉದ್ದೇಶಿಸಲಾಗಿತ್ತು ಎಂದು ಮೂವರು ವ್ಯಕ್ತಿಗಳು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಗುರುವಾರ, ಎಸ್‌ಎಸ್‌ಟಿ ತಂಡ ಮತ್ತು ಪೊಲೀಸ್ ಸಿಬ್ಬಂದಿ ದಕ್ಷಿಣ ಮುಂಬೈನ ಮರೈನ್ ಡ್ರೈವ್‌ನಲ್ಲಿ ಕಾರಿನಿಂದ 10.8 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದ್ದರು.
Advertisement