ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿರುವಂತೆಯೇ ಕೊನೆಗೂ ಮೌನ ಮುರಿದಿರುವ ಸಿಎಂ ಒಮರ್ ಅಬ್ದುಲ್ಲಾ, 'ನಾಗರಿಕರ ಮೇಲಿನ ದಾಳಿಗೆ ಯಾವುದೇ ಸಮರ್ಥನೆ ಬೇಕಿಲ್ಲ.. ಸಾಧ್ಯವಾದಷ್ಟೂ ಬೇಗ ಉಗ್ರರ ಆಟಾಟೋಪ ಕೊನೆಗೊಳಿಸಿ ಎಂದು ಭಾರತೀಯ ಸೇನೆಗೆ ಮನವಿ ಮಾಡಿದ್ದಾರೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಮಿಕರ ಮೇಲೆ ದಾಳಿ ಮಾಡಿದ್ದ ಕಮಾಂಡ್ ಸೇರಿ ಮೂವರು ಉಗ್ರರರನ್ನು ಭಾರತೀಯ ಸೇನಾ ಸಿಬ್ಬಂದಿ ಹೊಡೆದುರಳಿಸಿದ್ದರು. ಇದರ ಮಾರನೇ ದಿನವೇ ಉಗ್ರರು ಶ್ರೀನಗರದ ಮಾರುಕಟ್ಟೆಯಲ್ಲಿ ಗ್ರೆನೇಡ್ ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದು, ಈ ದಾಳಿ ಬೆನ್ನಲ್ಲೇ ಉಗ್ರರ ವಿಚಾರವಾಗಿ ಒಮರ್ ಅಬ್ದುಲ್ಲಾ ಸರ್ಕಾರ ಮೃದು ಧೋರಣೆ ತಳೆಯುತ್ತಿದ್ದು, ಇದೇ ಕಾರಣಕ್ಕೆ ಕಣಿವೆ ರಾಜ್ಯದಲ್ಲಿ ಉಗ್ರರ ಆಟಾಟೋಪ ಹೆಚ್ಚಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಈ ಟೀಕೆಗಳ ಬೆನ್ನಲ್ಲೇ ಇದೀಗ ಕೊನೆಗೂ ಮೌನ ಮುರಿದಿರುವ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಉಗ್ರರ ಆಟಾಟೋಪ ಅಂತ್ಯಗೊಳಿಸುವಂತೆ ಭಾರತೀಯ ಸೇನೆಗೆ ಮನವಿ ಮಾಡಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಒಮರ್ ಅಬ್ದುಲ್ಲಾ, 'ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅಸಹಜ ಗೊಂದಲ ಸೃಷ್ಟಿಸಿಲು ಹೀಗೆ ಮಾಡಲಾಗುತ್ತಿದೆ. ಸಾಮಾನ್ಯ ಜನರನ್ನು ಗುರಿ ಮಾಡಿಕೊಂಡು ಹೀಗೆ ದಾಳಿ ನಡೆಸುವುದು ಸಹಿಸಲು ಸಾಧ್ಯವಿಲ್ಲ. ಶ್ರೀನಗರದ 'ಸಂಡೇ ಮಾರ್ಕೆಟ್'ನಲ್ಲಿರುವ ಅಮಾಯಕ ವ್ಯಾಪಾರಿಗಳ, ಗ್ರಾಹಕರ ಮೇಲೆ ಗ್ರೆನೇಡ್ ದಾಳಿ ಆತಂಕಕಾರಿ ಸಂಗತಿಯಾಗಿದೆ. ಇದು ಅಮಾಯಕ ಜನರ ಮೇಲಿನ ದಾಳಿಯಾಗಿದ್ದು, ಖಂಡನೀಯ. ಇದಕ್ಕೆ ಯಾವ ಸಮರ್ಥನೆ ಕೇಳಲು ನಾವು ತಯಾರಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ, 'ಶ್ರೀನಗರ ಹಾಗೂ ಇಡೀ ರಾಜ್ಯದಲ್ಲಿ ಜನರು ಯಾವುದೇ ಭಯವಿಲ್ಲದೆ ಉತ್ತಮ ಬದುಕು ನಡೆಸುವಂಥಾಗಬೇಕು. ಅದಕ್ಕಾಗಿ ಭದ್ರತಾ ವ್ಯವಸ್ಥೆ ಬಲಪಡಿಸುವ ಜೊತೆಗೆ ಈ ದಾಳಿಯನ್ನು ಶೀಘ್ರವಾಗಿ ಕೊನೆಗೊಳಿಸಲು ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಸೇನೆಗೆ ಅವರು ಮನವಿ ಮಾಡಿದ್ದಾರೆ. ಅಲ್ಲದೆ ಈ ಪೋಸ್ಟ್ ಮೂಲಕ ಪ್ರಕರಣವನ್ನು ಕೇಂದ್ರ ಸರ್ಕಾರದ ಗಮನಕ್ಕೂ ತಂದಿದ್ದಾರೆ.
ಅಂದಹಾಗೆ ಕಣವೆ ರಾಜ್ಯದಲ್ಲಿ ವಾರಗಳಿಂದ ಭಯೋತ್ಪಾದಕರು ಹಾಗೂ ಸೇನಾ ಸಿಬ್ಬಂದಿ ನಡುವೆ ಸರಣಿ ಗುಂಡಿನ ಚಕಮಕಿ ನಡೆಯುತ್ತಿದೆ. ಶನಿವಾರ ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕನನ್ನು ಸೈನಿಕರು ನೆಲ್ಲಕ್ಕುರುಳಿಸಿದ್ದಾರೆ. ಸೇನೆಯಿಂದ ಕೊಲ್ಲಲ್ಪಟ್ಟ ಭಯೋತ್ಪಾದಕ ಉಸ್ಮಾನ್ ಲಷ್ಕರ್-ಎ-ತೊಯ್ಬಾ ಕಮಾಂಡರ್ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಧಿ ಕುಮಾರ್ ಬಿರ್ಡಿ ಅವರು ಮಾಹಿತಿ ನೀಡಿದ್ದಾರೆ.
ಸದ್ಯ ಸೇನಾ ಸಿಬ್ಬಂದಿ ಕಾರ್ಯಾಚರಣೆ ಅಂತ್ಯಗೊಂಡಿದೆ. ಒಬ್ಬ ಭಯೋತ್ಪಾದಕನನ್ನು ಕೊಂದಿದ್ದು, ಆತನನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ. ಆತ ಸಹ ಉಗ್ರ ಸಂಘಟನೆಯಲ್ಲಿ ಆಕ್ಟಿವ್ ಆಗಿಲ್ಲ ಎನ್ನಲಾಗಿದೆ. ಈ ಕಾರ್ಯಾಚರಣೆ ವೇಳೆ ಒಟ್ಟು 4 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Advertisement