ಗಾಜಿಯಾಬಾದ್: ಬಿಜೆಪಿ ಸಂಸದ ಅತುಲ್ ಗಾರ್ಗ್ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಕಟಿಸಿದ್ದಕ್ಕಾಗಿ ಗಾಜಿಯಾಬಾದ್‌ನ ಸ್ಥಳೀಯ ದಿನ ಪತ್ರಿಕೆಯ ಸಂಪಾದಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಗಾಜಿಯಾಬಾದ್‌ನ ಬಿಜೆಪಿ ಸಂಸದ ಅತುಲ್ ಗಾರ್ಗ್ ಅವರು ಅಕ್ಟೋಬರ್ 6 ರಂದು ಕಾಂಗ್ರೆಸ್ ನಾಯಕ ಡಾಲಿ ಶರ್ಮಾ ಅವರು ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.
ಡಾಲಿ ಶರ್ಮಾ ಅವರು, ‘ತಾನು ಭೂ ಮಾಫಿಯಾ’ದ ಭಾಗವೆಂದು ಕರೆದು ತಮ್ಮ ಇಮೇಜ್‌ಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಸಂಸದರು ಆರೋಪಿಸಿದ್ದರು.
ಈ ‘ಮಾನಹಾನಿಕರ’ ಸುದ್ದಿ ಪ್ರಕಟಿಸಿದ್ದಕ್ಕಾಗಿ ಆಪ್ ಅಭಿ ತಕ್ ಸಂಪಾದಕ ಇಮ್ರಾನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶನಿವಾರ ಅವರನ್ನು ಬಂಧಿಸಲಾಗಿದೆ.
ಗರ್ಗ್ ಅವರು 31,000 ಚದರ ಮೀಟರ್ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ಅದರಲ್ಲಿ ಹೌಸಿಂಗ್ ಸೊಸೈಟಿ ನಿರ್ಮಿಸಿದ್ದಾರೆ ಎಂದು ಶರ್ಮಾ ಆರೋಪಿಸಿದ್ದರು. ಅಲ್ಲದೆ ತನ್ನ ಆರೋಪಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಈ ದಾಖಲೆಗಳನ್ನು ಕೆಲವು ಸ್ಥಳೀಯ ಪತ್ರಿಕೆಗಳು ಮತ್ತು ವೆಬ್ ಪೋರ್ಟಲ್‌ಗಳು ಪ್ರಕಟಿಸಿದವು.
ಏತನ್ಮಧ್ಯೆ, ಸ್ಥಳೀಯ ಪತ್ರಕರ್ತರ ಸಂಘ ಜಿಲ್ಲಾಧಿಕಾರಿ ಇಂದ್ರ ವಿಕ್ರಮ್ ಸಿಂಗ್ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಈ ಸಂಬಂಧ ಮನವಿ ಪತ್ರ ಸಲ್ಲಿಸಿದ್ದು, ಅದರಲ್ಲಿ ಪೊಲೀಸರು ಒತ್ತಡದಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement