ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಎಡಪಂಥೀಯ ವ್ಯಕ್ತಿಯಾಗಿದ್ದು, ಬಿಜೆಪಿ ಪಕ್ಷ ವಿರೋಧಿಯಾಗಿದ್ದರು ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಭಾನುವಾರ ನಿರ್ದೇಶಕ ಗುರುಪ್ರಸಾದ್ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವಿನ ವಿಚಾರವಾಗಿ ಖಾಸಗಿ ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್, ಗುರುಪ್ರಸಾದ್ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ.
ನಟ ಜಗ್ಗೇಶ್ ವಿರುದ್ಧವೇ ಸಂಚು ಹೂಡಿದ್ದರೇ ನಿರ್ದೇಶಕ ಗುರುಪ್ರಸಾದ್?
ಇನ್ನು ನಟ ಜಗ್ಗೇಶ್ ಹೇಳಿರುವಂತೆ ಗುರು ಪ್ರಸಾದ್ ತಮ್ಮ ವಿರುದ್ಧ ಹುನ್ನಾರ ಮಾಡಿದ್ದರು ಎಂದು ಹೇಳುವ ಮೂಲಕ ‘ರಂಗನಾಯಕ’ ಸಿನಿಮಾದ ವೇಳೆ ಹೆಚ್ಚಿದ ಮನಸ್ತಾಪದ ಬಗ್ಗೆ ಮಾತನಾಡಿದ್ದಾರೆ. ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳಿಂದ ಜಗ್ಗೇಶ್ ಮತ್ತು ಗುರುಪ್ರಸಾದ್ ಅವರು ಕಾಂಬಿನೇಷನ್ಗೆ ಜನಮೆಚ್ಚುಗೆ ಸಿಕ್ಕಿತ್ತು. ಆದರೆ ‘ರಂಗನಾಯಕ’ ಸಿನಿಮಾದಲ್ಲಿ ಸಮಸ್ಯೆ ಉಂಟಾಯಿತು. ಆ ಸಂದರ್ಭವನ್ನು ಜಗ್ಗೇಶ್ ಈಗ ವಿವರಿಸಿದ್ದಾರೆ.
‘ಆತನ (ನಿರ್ದೇಶಕ ಗುರು ಪ್ರಸಾದ್) ಬದುಕು ಗೊಂದಲಮಯವಾಗಿತ್ತು. ಆದರೂ ಕೂಡ ನಮ್ಮ ಜೊತೆಗೆ ಕೆಲಸ ಮಾಡಿದ್ದ. ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಎಂಥ ಒಳ್ಳೆಯ ಸಿನಿಮಾಗಳು ಅದನ್ನು ನಾನು ಕೊನೇ ಉಸಿರು ಇರುವ ತನಕ ಮರೆಯೋಕೆ ಆಗಲ್ಲ. ಕಲಾವಿದನಾಗಿ ನಾನು ಆ ಸಿನಿಮಾಗಳನ್ನು ಬಹಳ ಪ್ರೀತಿಸಿದೆ. ಇತ್ತೀಚಿನ ದಿನಗಳಲ್ಲಿ ನನಗೆ ಆತನ ಬಗ್ಗೆ ಗೊತ್ತಾಗಿದ್ದು ಏನೆಂದರೆ, ಆತ ಬಿಜೆಪಿ ವಿರೋಧಿ’. ಗುರುಪ್ರಸಾದ್ ಎಡಪಂಥೀಯ ಚಿಂತಕನಾಗಿದ್ದ ಎಂದು ಜಗ್ಗೇಶ್ ಹೇಳಿದ್ದಾರೆ.
'ಜಗ್ಗೇಶ್ ಮಾನ ಮರ್ಯಾದೆ ಹರಾಜು ಹಾಕುತ್ತೇನೆ'
ಇದೇ ವೇಳೆ ರಂಗನಾಯಕ ಚಿತ್ರದ ಬಗ್ಗೆಯೂ ಮಾತನಾಡಿರುವ ಜಗ್ಗೇಶ್, 'ಇವನ ಮಾನ ಮರ್ಯಾದೆಯೆಲ್ಲ ಹೆಂಗೆ ಹರಾಜು ಹಾಕ್ತೀನಿ ನೋಡುತ್ತಾ ಇರಿ’ ಎಂದು ಗುರುಪ್ರಸಾದ್ ನನ್ನ ಬಗ್ಗೆ ಹೇಳಿಕೊಂಡಿದ್ದನಂತೆ. ಅದು ನನಗೆ ಗೊತ್ತಾಗಿಹೋಯ್ತು. ನಾನು ತುಂಬಾ ಭಯಭೀತನಾದೆ.
ಹಾಗಾಗಿ ನನಗೆ ಸಿನಿಮಾ ತೋರಿಸು ಎಂದೆ. ಆದರೆ ಅವನು ತೋರಿಸಲಿಲ್ಲ. ನನ್ನ ಬಳಿ ಪಿಕ್ಚರ್ ಕೇಳೋದೆಲ್ಲ ಇಟ್ಕೋಬೇಡಿ. ನಾನು ಪಿಕ್ಚರ್ ತೋರಿಸಿಕೊಂಡು ಕೂರುವವನಲ್ಲ ಅಂತ ಹೇಳಿದ್ದ. ಸಿನಿಮಾ ರಿಲೀಸ್ ಆದ ಬಳಿಕ ನನ್ನ ಜೀವನದಲ್ಲೇ ಆಗದೇ ಇರುವಷ್ಟು ಅವಮಾನ ಆ ಒಂದು ಸಿನಿಮಾದಿಂದ ಆಯಿತು’ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.
‘ಎಲ್ಲ ಯಶಸ್ವಿ ವ್ಯಕ್ತಿಗಳಿಗೆ ಶಿಸ್ತು ಪ್ರಧಾನವಾಗಿರುತ್ತದೆ. ನಾನು ಕೂಡ ಹಲವು ಕೆಲಸಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡಿದೆ. ತಾಳ್ಮೆಯಿಂದ ಕಾದು ನಿಮ್ಮಲ್ಲರ ಕಣ್ಣ ಮುಂದೆ ನವರಸ ನಾಯಕ ಆದೆ. ಎಂಎಲ್ಎ, ಎಂಎಲ್ಸಿ, ಸಂಸದ ಆದೆ. ತಾಳ್ಮೆ ಇದ್ದರೆ ಪ್ರತಿಯೊಬ್ಬರಿಗೂ ಯಶಸ್ಸು ಬರುತ್ತದೆ’ ಎಂದು ಜಗ್ಗೇಶ್ ಹೇಳಿದ್ದಾರೆ.
ನಿಗೂಢ ಖಾಯಿಲೆ
ಇದೇ ವೇಳೆ ‘ಅವನಿಗೆ ಮೈಯೆಲ್ಲ ಕಡಿತ ಬರುತ್ತಲ್ಲ, ಆ ಕಾಯಿಲೆ ಇತ್ತು. ಕೆರೆದುಕೊಂಡಾಗ ಮುಖ, ಮೈಯಲ್ಲಿ ಕೀವು, ರಕ್ತ ಬರುತ್ತಿತ್ತು. ನಾವು ತಿನ್ನುವ ತಟ್ಟೆಗೆ ಕೈ ಹಾಕುತ್ತಿದ್ದ. ನಮಗೆ ಒಂದೇ ಭಯ. ಹಾಗಾಗಿ ಅವನಿಗೆ ಕಾಣದ ರೀತಿಯಲ್ಲಿ ದೂರ ಕುಳಿತುಕೊಂಡು ಊಟ ಮಾಡುತ್ತಿದ್ದೆ. ಚಿಕಿತ್ಸೆಗೆ ಹೋಗು ಎಂದರೆ ಹೋಗುತ್ತಿರಲಿಲ್ಲ. ಇಡೀ ಮೈಯೆಲ್ಲ ಆಗಬೇಕು, ಅದನ್ನು ನೋಡಬೇಕು ಅಂತ ಹೇಳುತ್ತಿದ್ದ. ಅಂಥವರಿಗೆ ಏನು ಹೇಳೋದು? ತಪ್ಪು ಮಾಡಿ, ಮಾನಸಿಕವಾಗಿ ಕುಗ್ಗಿದ್ದ’ ಎಂದು ಜಗ್ಗೇಶ್ ಹೇಳಿದ್ದಾರೆ.
Advertisement