ನವದೆಹಲಿ: ಹಬ್ಬಗಳ ಕಾರಣದಿಂದ ನವೆಂಬರ್ 13ಕ್ಕೆ ನಿಗದಿಯಾಗಿದ್ದ ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ನವೆಂಬರ್ 20ಕ್ಕೆ ಮರು ನಿಗದಿಪಡಿಸಿದೆ.
"ಕೆಲವು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ದಿನಾಂಕ ಬದಲಾವಣೆಗಾಗಿ ವಿವಿಧ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳು(ಬಿಜೆಪಿ, ಐಎನ್‌ಸಿ, ಬಿಎಸ್‌ಪಿ, ಆರ್‌ಎಲ್‌ಡಿ ಸೇರಿದಂತೆ) ಮತ್ತು ಕೆಲವು ಸಾಮಾಜಿಕ ಸಂಸ್ಥೆಗಳು ಆಯೋಗಕ್ಕೆ ಮನವಿ ಮಾಡಿದ್ದವು. ನವೆಂಬರ್ 13 ರಂದು ಉಪ-ಚುನಾವಣೆ ನಡೆಯುವ ದಿನದಂದು ದೊಡ್ಡ ಪ್ರಮಾಣದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬಗಳು ಇರುವುದನ್ನು ಪರಿಗಣಿಸಿ ಮತ್ತು ಇದು ಹೆಚ್ಚಿನ ಸಂಖ್ಯೆಯ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು ಮತ್ತು ಮತದಾನದ ಸಮಯದಲ್ಲಿ ಕಡಿಮೆ ಮತದಾರರ ಭಾಗವಹಿಸುವಿಕೆಗೆ ಕಾರಣವಾಗಬಹುದು" ಎಂಬ ಉದ್ದೇಶದಿಂದ ಉಪ ಚುನಾವಣೆಯನ್ನು ನವೆಂಬರ್ 20ಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಒಂಬತ್ತು, ಪಂಜಾಬ್‌ನಲ್ಲಿ ನಾಲ್ಕು ಮತ್ತು ಕೇರಳದಲ್ಲಿ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಸೇರಿದಂತೆ ಹಲವು ಪಕ್ಷಗಳು ವಿವಿಧ ಹಬ್ಬಗಳ ದೃಷ್ಟಿಯಿಂದ ಚುನಾವಣೆಯನ್ನು ಮರು ನಿಗದಿಪಡಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು.
ಕಾಂಗ್ರೆಸ್ ಪ್ರಕಾರ, ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ಬಹುತೇಕರು ನವೆಂಬರ್ 13 ರಿಂದ 15 ರವರೆಗೆ ಕಲ್ಪಾತಿ ರಸ್ತೋಲ್ಸವಂ ಹಬ್ಬವನ್ನು ಆಚರಿಸುತ್ತಾರೆ.
ಪಂಜಾಬ್‌ನಲ್ಲಿ, ಶ್ರೀ ಗುರುನಾನಕ್ ದೇವ್ ಅವರ 555ನೇ ಪ್ರಕಾಶ್ ಪರ್ವ್ ಅನ್ನು ನವೆಂಬರ್ 15 ರಂದು ಆಚರಿಸಲಾಗುತ್ತಿದೆ ಮತ್ತು ನವೆಂಬರ್ 13 ರಿಂದ 'ಅಖಂಡ ಪಥ'ವನ್ನು ಆಯೋಜಿಸಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ.
ಇನ್ನು ಉತ್ತರ ಪ್ರದೇಶದಲ್ಲಿ ನವೆಂಬರ್ 15 ರಂದು ಕಾರ್ತಿಕ ಪೂರ್ಣಿಮೆಗೆ ಮುಂಚಿತವಾಗಿ ಜನ ಮೂರು-ನಾಲ್ಕು ದಿನಗಳ ಕಾಲ ಪ್ರಯಾಣಿಸುತ್ತಾರೆ ಎಂದು ಬಿಜೆಪಿ, ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಹೇಳಿವೆ.
Advertisement