ಮುಂಬೈ: ಮಹಾರಾಷ್ಟ್ರ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಶಿವಸೇನೆ ಉದ್ಧವ್ ಠಾಕ್ರೆ ಬಣದಲ್ಲಿ ಬಂಡಾಯದ ಬಿಸಿ ಜೋರಾಗಿದ್ದು, ಐವರು ಬಂಡಾಯ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಹೌದು.. ಮಹಾರಾಷ್ಟ್ರ ಚುನಾವಣೆಯಲ್ಲಿ ನಾಮಪತ್ರ ಹಿಂತೆಗೆದುಕೊಳ್ಳದ ಐವರು ಬಂಡಾಯ ನಾಯಕರನ್ನು ಶಿವಸೇನೆ ಉದ್ಧವ್ ಠಾಕ್ರೆ ಬಣ ಉಚ್ಚಾಟಿಸಿದೆ. ಭಿವಂಡಿ ಮಾಜಿ ಶಾಸಕ ರೂಪೇಶ್ ಮ್ಹಾತ್ರೆ, ವಿಶ್ವಾಸ್ ನಾಂದೇಕರ್, ಚಂದ್ರಕಾಂತ್ ಘುಗುಲ್, ಸಂಜಯ್ ಅವರಿ ಮತ್ತು ಪ್ರಸಾದ್ ಠಾಕ್ರೆ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಚುನಾವಣೆಯಲ್ಲಿ ಶಿವಸೇನೆ ಉದ್ಧವ್ ಠಾಕ್ರೆ ಬಣ ಮಹಾವಿಕಾಸ್ ಅಘಾಡಿ ಮೈತಿಕೂಟದಿಂದ ಕಣಕ್ಕಿಳಿದಿದ್ದು, ಮೈತ್ರಿ ಅಭ್ಯರ್ಥಿಗಳನ್ನು ಇಲ್ಲಿ ಕಣಕ್ಕಿಳಿಸಲಾಗಿದೆ. ಕೆಲ ಕ್ಷೇತ್ರಗಳಲ್ಲಿ ಟಿಕೆಟ್ ಗೊಂದಲವಿದ್ದು, ಪ್ರತಿಪಕ್ಷದ ಮಹಾ ವಿಕಾಸ್ ಅಘಾಡಿ ಬಂಡಾಯ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರಗಳನ್ನು ಹಿಂಪಡೆಯಲು ಒಂದು ಗಂಟೆಯ ಸಮಯ ನೀಡಿದ ಹೊರತಾಗಿಯೂ ಅವರು ನಾಮಪತ್ರ ವಾಪಸ್ ಪಡೆಯದ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ತಿಳಿದುಬಂದಿದೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಹಿಂಪಡೆಯಲು ವಿಫಲರಾದ ಬಂಡಾಯಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ.
Advertisement