ಮುಂಬೈ: ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಅವರ ಸಹೋದರ ಎಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿಯಿಂದ 5 ಕೋಟಿ ರೂ. ಬೇಡಿಕೆಯೊಂದಿಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಹೊಸ ಬೆದರಿಕೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈ ಸಂಬಂಧ ಹುಬ್ಬಳ್ಳಿಯಲ್ಲಿ ಒಬ್ಬ ಶಂಕಿತನನ್ನು ಪತ್ತೆಹಚ್ಚಲಾಗಿದೆ. ಪೊಲೀಸ್ ತಂಡ ಅಲ್ಲಿಗೆ ತಲುಪಿದೆ ಆದರೆ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ. 1998 ರ ಕೃಷ್ಣಮೃಗ ಬೇಟೆ ಘಟನೆಯ ಬಗ್ಗೆ ಸ್ಪಷ್ಟವಾಗಿ ಕ್ಷಮೆಯಾಚಿಸುವಂತೆ ಖಾನ್ ಅವರನ್ನು ಕೇಳುವ ಬೆದರಿಕೆ ಸಂದೇಶ ಸೋಮವಾರ ತಡರಾತ್ರಿ ವರ್ಲಿಯಲ್ಲಿರುವ ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಯ ವಾಟ್ಸಾಪ್ ಸಹಾಯವಾಣಿಗೆ ಬಂದಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ,
ಸಂದೇಶ ಕಳುಹಿಸುವವರು ತಾನು ಲಾರೆನ್ಸ್ ಬಿಷ್ಣೋಯಿ ಅವರ ಸಹೋದರ ಎಂದು ಹೇಳಿಕೊಂಡಿದ್ದಾರೆ. ಸಲ್ಮಾನ್ ಖಾನ್ ಬದುಕಿರಬೇಕಾದರೆ ನಮ್ಮ (ಬಿಷ್ಣೋಯಿ ಸಮುದಾಯದ) ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಅಥವಾ 5 ಕೋಟಿ ರೂ. ಹಣ ನೀಡಬೇಕು. ಇಲ್ಲದಿದ್ದರೆ ನಾವು ಅವರನ್ನು ಕೊಲ್ಲುತ್ತೇವೆ ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾನ್ ಅವರ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ. ವರ್ಲಿ ಪೊಲೀಸರು ಹುಬ್ಬಳ್ಳಿಗೆ ಸಂದೇಶ ಕಳುಹಿಸಿದವರ ಮೇಲೆ ನಿಗಾ ಇಟ್ಟಿದ್ದಾರೆ. ಒಂದು ತಂಡವನ್ನು ಕರ್ನಾಟಕಕ್ಕೆ ಕಳುಹಿಸಲಾಗಿದೆ.
ವೆಲ್ಡರ್ ಆಗಿರುವ 35 ವರ್ಷದ ವ್ಯಕ್ತಿ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾನೆ ಎಂದು ಶಂಕಿಸಲಾಗಿದ್ದು, ಆತನನ್ನು ಇನ್ನೂ ಬಂಧಿಸಿಲ್ಲ. ಆದಾಗ್ಯೂ, ವಿಚಾರಣೆ ನಡೆಸುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ. ಈ ಹಿಂದೆಯೂ ಸಲ್ಮಾನ್ ಖಾನ್ ಅವರಿಗೆ ಇದೇ ರೀತಿಯ ಬೆದರಿಕೆಗಳು ಬಂದಿದ್ದವು.
Advertisement