ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಅಪರಿಚಿತ ಉಗ್ರನೊಬ್ಬನನ್ನು ಹೊಡೆದುರುಳಿಸಲಾಗಿದೆ. ಕೆತ್ಸುನ್ ಅರಣ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ. ಎನ್‌ಕೌಂಟರ್ ಮುಗಿದ ಬಳಿಕ ಹತ್ಯೆಗೀಡಾದ ಉಗ್ರನ ಗುರುತು ಪತ್ತೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಚುನಾಯಿತ ಸರ್ಕಾರವು ಅಧಿಕಾರ ವಹಿಸಿಕೊಂಡಾಗಿನಿಂದ, ಭಯೋತ್ಪಾದಕರು ತಮ್ಮ ಚಟುವಟಿಕೆಗಳನ್ನು ಹೆಚ್ಚಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಶಾಂತಿಯುತ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದರಿಂದ ಪಾಕಿಸ್ತಾನದ ಗಡಿಯುದ್ದಕ್ಕೂ ಉಗ್ರಗಾಮಿ ಚಟುವಟಿಕೆಯಲ್ಲಿ ನಿರತರಾದವರು ಹತಾಶರಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ.
ನವೆಂಬರ್ 2 ರಂದು ಖನ್ಯಾರ್ ಪ್ರದೇಶದಲ್ಲಿ ಒಂದು ದಿನ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಉಸ್ಮಾನ್ ಭಾಯಿ ಅಲಿಯಾಸ್ ಚೋಟಾ ವಲೀದ್ ಎಂದು ಗುರುತಿಸಲಾದ ಎಲ್ಇಟಿಯ ಉನ್ನತ ಕಮಾಂಡರ್ ನನ್ನು ಹತ್ಯೆಗೈಯಲಾಗಿತ್ತು. ಖನ್ಯಾರ್ ಎನ್ ಕೌಂಟರ್ ನಲ್ಲಿ ಇಬ್ಬರು ಸ್ಥಳೀಯ ಪೊಲೀಸರು ಮತ್ತು ಇಬ್ಬರು ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದರು.
ಕಳೆದ ತಿಂಗಳು ಗಂದರ್‌ಬಾಲ್ ಜಿಲ್ಲೆಯ ಗಗಂಗೀರ್ ಪ್ರದೇಶದಲ್ಲಿ ಮೂಲಸೌಕರ್ಯ ಯೋಜನೆಯ ಕಂಪನಿಯ ಆರು ಕಾರ್ಮಿಕರು ಮತ್ತು ಸ್ಥಳೀಯ ವೈದ್ಯರನ್ನು ಉಗ್ರರು ಗುಂಡಿಟ್ಟು ಕೊಂದಿದ್ದರು. ಶ್ರೀನಗರ-ಸೋನಾಮಾರ್ಗ್ ಅನ್ನು ಸರ್ವಋತು ರಸ್ತೆಯನ್ನಾಗಿ ಮಾಡಲು ಮತ್ತು ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆ, ಉದ್ಯೋಗವನ್ನು ಸೃಷ್ಟಿಸಲು ಕಾರ್ಮಿಕರು ಗಗನ್ಗೀರ್‌ನಿಂದ ಸೋನಾ ಮಾರ್ಗ್ ಪ್ರವಾಸಿಧಾಮಕ್ಕೆ ಸುರಂಗವನ್ನು ನಿರ್ಮಿಸುತ್ತಿದ್ದರು. ಗಗನ್ಗೀರ್ ದಾಳಿಯಲ್ಲಿ ಮೃತಪಟ್ಟವರಲ್ಲಿ ಆರು ಮಂದಿ ಸ್ಥಳೀಯೇತರ ಕಾರ್ಮಿಕರು ಮತ್ತು ಬುದ್ಗಾಮ್ ಜಿಲ್ಲೆಗೆ ಸೇರಿದ ವೈದ್ಯರು ಸೇರಿದ್ದಾರೆ.
Advertisement