ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪಿಎಂ ವಿದ್ಯಾಲಕ್ಷ್ಮಿ ಯೋಜನೆಗೆ ಅನುಮೋದನೆ ನೀಡಿದೆ. ಇದು ಕೇಂದ್ರ ವಲಯದ ಹೊಸ ಯೋಜನೆಯಾಗಿದ್ದು, ಆರ್ಥಿಕ ನಿರ್ಬಂಧಗಳಿಂದಾಗಿ ಉನ್ನತ ಅಧ್ಯಯನದಿಂದ ವಂಚಿತರಾಗುವುದನ್ನು ತಡೆಯಲು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿಯು 2020ರ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಹೊರಹೊಮ್ಮುವ ಮತ್ತೊಂದು ಪ್ರಮುಖ ಉಪ ಕ್ರಮವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಸಾರ್ವಜನಿಕ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕ್ರಮಗಳ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ಲಭ್ಯವಾಗುವಂತೆ ಮಾಡಲು ಶಿಫಾರಸು ಮಾಡಿದೆ.
ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯಡಿಯಲ್ಲಿ, ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ (QHEI) ಪ್ರವೇಶ ಪಡೆಯುವ ಯಾವುದೇ ವಿದ್ಯಾರ್ಥಿಯು ಯಾವುದೇ ಮೇಲಾಧಾರ ಅಥವಾ ಗ್ಯಾರಂಟಿ ಇಲ್ಲದೆ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಈ ಯೋಜನೆಯು ಸರಳ, ಪಾರದರ್ಶಕ ಮತ್ತು ವಿದ್ಯಾರ್ಥಿ ಸ್ನೇಹಿ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಪರಸ್ಪರ ಕಾರ್ಯನಿರ್ವಹಿಸಬಲ್ಲ ಮತ್ತು ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ. ದೇಶದ 860 ಅರ್ಹ ಅತ್ಯುನ್ನತ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದ ಸಂಭಾವ್ಯ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರಧಾನಮಂತ್ರಿ-ವಿದ್ಯಾಲಕ್ಷ್ಮಿ ಯೋಜನೆಯು ಒಳಗೊಂಡಿದೆ. ರೂ. 7.5 ಲಕ್ಷದವರೆಗಿನ ಸಾಲದ ಮೊತ್ತಕ್ಕೆ, ವಿದ್ಯಾರ್ಥಿಯು ಬಾಕಿ ಉಳಿದಿರುವ ಡೀಫಾಲ್ಟ್ ನ ಶೇ.75 ರಷ್ಟು ಸಾಲ ಖಾತರಿಗೆ ಅರ್ಹರಾಗಿರುತ್ತಾರೆ.
ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲಗಳು ಲಭ್ಯವಾಗುವಂತೆ ಬ್ಯಾಂಕ್ ಗಳಿಗೆ ಬೆಂಬಲ ನೀಡಲಾಗುತ್ತದೆ. ಮೇಲಿನವುಗಳ ಜೊತೆಗೆ, ವಾರ್ಷಿಕ ರೂ.8 ಲಕ್ಷದವರೆಗಿನ ಕುಟುಂಬದ ಆದಾಯವನ್ನು ಹೊಂದಿರುವ ಮತ್ತು ಯಾವುದೇ ಸರ್ಕಾರಿ ವಿದ್ಯಾರ್ಥಿವೇತನ ಅಥವಾ ಬಡ್ಡಿ ರಿಯಾಯಿತಿ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ, ರೂ. 10 ಲಕ್ಷದವರೆಗಿನ ಸಾಲಕ್ಕೆ ಮೊರಟೋರಿಯಂ (ತಡೆಹಿಡಿದ) ಅವಧಿಯಲ್ಲಿ ಶೇ. 3 ರಬಡ್ಡಿ ರಿಯಾಯಿತಿಯನ್ನು ಸಹ ಒದಗಿಸಲಾಗುತ್ತದೆ. ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಬಡ್ಡಿ ರಿಯಾಯಿತಿ ನೀಡಲಾಗುವುದು. ಸರ್ಕಾರಿ ಸಂಸ್ಥೆಗಳಿಂದ ಬಂದಿರುವ ಮತ್ತು ತಾಂತ್ರಿಕ / ವೃತ್ತಿಪರ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. 2024-25 ರಿಂದ 2030-31ರ ಅವಧಿಯಲ್ಲಿ ರೂ. 3,600 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈ ಅವಧಿಯಲ್ಲಿ 7 ಲಕ್ಷ ಹೊಸ ವಿದ್ಯಾರ್ಥಿಗಳು ಈ ಬಡ್ಡಿ ರಿಯಾಯಿತಿಯ ಲಾಭವನ್ನು ಪಡೆಯುವ ನಿರೀಕ್ಷೆಯಿದೆ.
ಉನ್ನತ ಶಿಕ್ಷಣ ಇಲಾಖೆಯು "ಪಿಎಂ-ವಿದ್ಯಾಲಕ್ಷ್ಮಿ" ಎಂಬ ಏಕೀಕೃತ ಪೋರ್ಟಲ್ ಅನ್ನು ಹೊಂದಿದ್ದು, ಸರಳೀಕೃತ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಮತ್ತು ಬಡ್ಡಿ ರಿಯಾಯಿತಿಗೆ ಅರ್ಜಿ ಸಲ್ಲಿಸಲು ಮತ್ತು ಎಲ್ಲಾ ಬ್ಯಾಂಕ್ ಗಳು ಬಳಸಲು ಸಾಧ್ಯವಾಗುತ್ತದೆ. ಇ-ವೋಚರ್ ಮತ್ತು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ವ್ಯಾಲೆಟ್ ಮೂಲಕ ಬಡ್ಡಿ ರಿಯಾಯಿತಿಯನ್ನು ಪಾವತಿಸಲಾಗುತ್ತದೆ.
ಪಿಎಂ ವಿದ್ಯಾಲಕ್ಷ್ಮಿ ಯೋಜನೆಯು ಭಾರತದ ಯುವಜನರಿಗೆ ಗುಣಮಟ್ಟದ ಉನ್ನತ ಶಿಕ್ಷಣದ ಪ್ರವೇಶವನ್ನು ಗರಿಷ್ಠಗೊಳಿಸಲು ಶಿಕ್ಷಣ ಮತ್ತು ಆರ್ಥಿಕ ಒಳಗೊಳ್ಳುವಿಕೆಯ ಕ್ಷೇತ್ರದಲ್ಲಿ ಕಳೆದ ದಶಕದಲ್ಲಿ ಭಾರತ ಸರ್ಕಾರವು ಕೈಗೊಂಡ ಉಪಕ್ರಮಗಳ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಉನ್ನತ ಶಿಕ್ಷಣ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಪಿಎಂ-ಯು ಎಸ್ ಪಿ ಯ ಎರಡು ಘಟಕ ಯೋಜನೆಗಳಾದ ಕೇಂದ್ರ ವಲಯದ ಬಡ್ಡಿ ಸಬ್ಸಿಡಿ (ಸಿ ಎಸ್ ಐ ಎಸ್) ಮತ್ತು ಶಿಕ್ಷಣ ಸಾಲಗಳ ಕ್ರೆಡಿಟ್ ಗ್ಯಾರಂಟಿ ಫಂಡ್ ಯೋಜನೆ (ಸಿ ಜಿ ಎಫ್ ಎಸ್ ಇ ಎಲ್) ಗೆ ಪೂರಕವಾಗಿರುತ್ತದೆ.
ಪಿಎಂ-ಯು ಎಸ್ ಪಿ ಸಿ ಎಸ್ ಐ ಎಸ್ ಅಡಿಯಲ್ಲಿ ವಾರ್ಷಿಕ ರೂ. 4.5 ಲಕ್ಷದವರೆಗಿನ ಕುಟುಂಬದ ಆದಾಯ ಮತ್ತು ಅನುಮೋದಿತ ಸಂಸ್ಥೆಗಳಿಂದ ತಾಂತ್ರಿಕ/ವೃತ್ತಿಪರ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ರೂ.10 ಲಕ್ಷದವರೆಗಿನ ಶಿಕ್ಷಣ ಸಾಲಗಳಿಗೆ ಮೊರಟೋರಿಯಂ ಅವಧಿಯಲ್ಲಿ ಸಂಪೂರ್ಣ ಬಡ್ಡಿ ರಿಯಾಯಿತಿಯನ್ನು ಪಡೆಯುತ್ತಾರೆ. ಹೀಗಾಗಿ, ಪಿಎಂ ವಿದ್ಯಾಲಕ್ಷ್ಮಿ ಮತ್ತು ಪಿಎಂ-ಯು ಎಸ್ ಪಿ ಒಟ್ಟಾಗಿ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಮತ್ತು ಅನುಮೋದಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣವನ್ನು ಪಡೆಯಲು ಸಮಗ್ರ ಬೆಂಬಲವನ್ನು ನೀಡುತ್ತದೆ.
Advertisement