ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷ ಶಿವಸೇನೆ(ಯುಬಿಟಿ)ಯ ಚುನಾವಣ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದ್ದು, ಪುರುಷ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಧಾರವಿ ಪುನರಾಭಿವೃದ್ಧಿ ಯೋಜನೆ ರದ್ದು ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ.
ಶಿವಸೇನೆ(ಯುಬಿಟಿ) ಪ್ರಣಾಳಿಕೆಯಲ್ಲಿ ನೀಡಿದ ಹೆಚ್ಚಿನ ಭರವಸೆಗಳು ಪ್ರತಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ(MVA)ಯ ಒಟ್ಟಾರೆ ಭರವಸೆಗಳ ಭಾಗವಾಗಿವೆ. ಆದರೆ ವಿಶೇಷ ಗಮನ ಹರಿಸಬೇಕಾದ ಕೆಲವು ಅಂಶಗಳಿವೆ ಎಂದು ಠಾಕ್ರೆ ಹೇಳಿದ್ದಾರೆ.
ಶಿವಸೇನೆ(ಯುಬಿಟಿ), ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ(ಎಸ್‌ಪಿ) ಒಳಗೊಂಡ ಎಂವಿಎ ನವೆಂಬರ್ 20 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ ಎಂದು ಅವರು ಹೇಳಿದರು.
ಎಂವಿಎ ಅಧಿಕಾರಕ್ಕೆ ಬಂದರೆ ರಾಜ್ಯದ ವಿದ್ಯಾರ್ಥಿನಿಯರು ಸರ್ಕಾರಿ ನೀತಿಯಡಿಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ರೀತಿಯಲ್ಲೇ ಪುರುಷ ವಿದ್ಯಾರ್ಥಿಗಳಿಗೂ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಠಾಕ್ರೆ ಭರವಸೆ ನೀಡಿದರು.
ಎಂವಿಎ ಅಗತ್ಯ ವಸ್ತುಗಳ ಬೆಲೆಯನ್ನು ಸ್ಥಿರವಾಗಿರಿಸುತ್ತದೆ ಎಂದು ಅವರು ಹೇಳಿದರು.
ಧಾರಾವಿ ಪುನರಾಭಿವೃದ್ಧಿ ಯೋಜನೆಗೆಯು ಮುಂಬೈ ಮೇಲೆ ಪರಿಣಾಮ ಬೀರುವುದರಿಂದ ಅದನ್ನು ರದ್ದುಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ನಗರ, ಸಣ್ಣ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ "ಮಣ್ಣಿನ ಮಕ್ಕಳಿಗಾಗಿ" ಕೈಗೆಟುಕುವ ಮನೆಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
Advertisement