ಲಂಡನ್: ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿನ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲಾಗುತ್ತದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಘೋಷಣೆ ಮಾಡಿದ್ದಾರೆ.
ಆಕ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಕರೊಂದಿಗಿನ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಣ್ಣಾಮಲೈ, 'ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಾವು ಅಲ್ಪ ಸಂಖ್ಯಾತರನ್ನು ನ್ಯಾಯೋಚಿತವಾಗಿ ನಡೆಸಿಕೊಂಡು ಬಂದಿದ್ದೇವೆ ಮತ್ತು ಮುಂದೆಯೂ ಕೂಡ ನ್ಯಾಯೋಚಿತವಾಗಿ ನಡೆಸಿಕೊಳ್ಳುತ್ತೇವೆ.
ಭಾರತ ಒಂದು ವಿಶಿಷ್ಟ ಮತ್ತು ಅನನ್ಯ ರಾಷ್ಟ್ರವಾಗಿದ್ದು, ಪ್ರಬಲ ಜಾತ್ಯಾತೀಯ ರಾಷ್ಟ್ರವಾಗಿದೆ. ನಮ್ಮ ನೆರೆಹೊರೆಯ ದೇಶಗಳು ಧಾರ್ಮಿಕವಾಗಿ ಪ್ರಾಮುಖ್ಯತೆ ನೀಡುತ್ತಿವೆ. ಆದರೆ ಭಾರತದಲ್ಲಿ ಎಲ್ಲ ಸಮುದಾಯ ಮತ್ತು ಧರ್ಮೀಯರನ್ನೂ ಸಮಾನವಾಗಿ ನೋಡಲಾಗುತ್ತದೆ ಎಂದರು.
ಅಂತೆಯೇ ದುರಾದೃಷ್ಟವಶಾತ್ ಭಾರತದಲ್ಲಿ ಶೇ.81ರಷ್ಟಿರುವ ಬಹುಸಂಖ್ಯಾತರು ಪೂಜಿಸುವ ದೇಗುಲಗಳನ್ನು ಸಮಾನವಾಗಿ ಕಾಣಲಾಗುತ್ತಿಲ್ಲ. ಹೀಗಾಗಿ ನಾವು ಒಂದು ನಿರ್ಧಾರಕ್ಕೆ ಬಂದಿದ್ದು, ದೇವಾಲಯಗಳಿಗೆ ಅವುಗಳದ್ದೇ ಆದ ಮಹತ್ವ ನೀಡಬೇಕಿದೆ. ಚರ್ಚ್ ಗಳನ್ನು ಸರ್ಕಾರ ನಿಯಂತ್ರಿಸುತ್ತಿಲ್ಲ.. ಮಸೀದಿಗಳ ಮೇಲೆ ಸರ್ಕಾರ ನಿಯಂತ್ರಣ ಹೊಂದಿಲ್ಲ.
ಹೀಗಿರುವಾಗ ದೇವಾಲಯಗಳ ನಿಯಂತ್ರಣ ಕೂಡ ಸರ್ಕಾರದಲ್ಲಿರಬಾರದು. ದೇವಾಲಯಗಳನ್ನೂ ಕೂಡ ಸಮಾನವಾಗಿ ಕಾಣುವ ನಿರ್ಧಾರಕ್ಕೆ ಬಂದಿದ್ದೇವೆ. ಹೀಗಾಗಿ ನಾವು ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದರೆ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲಾಗುತ್ತದೆ ಎಂದು ಅಣ್ಣಾಮಲೈ ಹೇಳಿದರು.
ನಿಜವಾದ ಜ್ಯಾತ್ಯಾತೀತತೆ ಎಂದರೆ ಎಲ್ಲ ಧರ್ಮೀಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಿದೆ. ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುವುದಾಗಿದೆ. ಇದೇ ಕಾರ್ಯವನ್ನು ಈಗ ಬಿಜೆಪಿ ಮಾಡುತ್ತಿದೆ ಎಂದು ಅಣ್ಣಾಮಲೈ ಹೇಳಿದರು.
Advertisement