ಅಮ್ರೇಲಿ: ಮನುಷ್ಯರು, ಪ್ರಾಣಿ ಪಕ್ಷಿಗಳು ಸೇರಿದಂತೆ ಜೀವಿಗಳು ಮೃತಪಟ್ಟಾಗ ಸಮಾಧಿ ಮಾಡುವುದು ಕೇಳಿದ್ದೇವೆ, ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ರೈತ ಕುಟುಂಬವೊಂದು ತಮ್ಮ "ಅದೃಷ್ಟ"ದ ವಾಗನರ್ ಕಾರಿಗೆ ಅದ್ಧೂರಿ ಸಮಾಧಿ ಕಾರ್ಯಕ್ರಮವನ್ನು ನಡೆಸಿ ಸುದ್ದಿಯಾಗಿದೆ.
ಸಜೀವ ಪ್ರಾಣಿ, ಪಕ್ಷಿಗಳಿಗೆ ಸಮಾಧಿ ಕಾರ್ಯ ಮಾಡುವಂತೆ ಇವರು ನಿರ್ಜೀವ ವಸ್ತುವಾದ ಕಾರಿಗೆ ಮಾಡಿದ್ದಾರೆ. ಪಾದರ್ಶಿಂಗ ಗ್ರಾಮದಲ್ಲಿ ಸಂಜಯ ಪೋಲಾರ ಮತ್ತು ಅವರ ಕುಟುಂಬದವರು ಆಯೋಜಿಸಿದ್ದ ಸಮಾರಂಭದಲ್ಲಿ ಧರ್ಮಗುರುಗಳು ಮತ್ತು ಆಧ್ಯಾತ್ಮಿಕ ಮುಖಂಡರು ಸೇರಿದಂತೆ ಸುಮಾರು 1,500 ಜನರು ಭಾಗವಹಿಸಿದ್ದರು.
ಸಮಾಧಿ ಕಾರ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೋಲಾರಾ ಮತ್ತು ಅವರ ಕುಟುಂಬವು ತಮ್ಮ ಜಮೀನಿನಲ್ಲಿ 15 ಅಡಿ ಆಳದ ಹೊಂಡದಲ್ಲಿ ಇಳಿಜಾರು ಪ್ರದೇಶದಲ್ಲಿ ಸಮಾಧಿ ಕಾರ್ಯ ನಡೆಸುತ್ತಿರುವುದನ್ನು ನೋಡಬಹುದು.
ಹೂ, ಮಾಲೆಗಳಿಂದ ಅಲಂಕೃತಗೊಂಡಿದ್ದ ಕಾರನ್ನು ಮನೆಯಿಂದ ಪೋಲಾರ ಅವರ ಜಮೀನಿಗೆ ಬಹಳ ಖುಷಿಯಿಂದ ಓಡಿಸಿಕೊಂಡು ಬಂದು ಇಳಿಜಾರಿನಲ್ಲಿ ಇಳಿಸಿದ್ದಾರೆ. ವಾಹನವನ್ನು ಹಸಿರು ಬಟ್ಟೆಯಿಂದ ಮುಚ್ಚಲಾಗಿತ್ತು, ಪುರೋಹಿತರು ಮಂತ್ರ ಪಠಿಸುತ್ತಿದ್ದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿ ಗುಲಾಬಿ ದಳಗಳನ್ನು ಸುರಿಸುವುದರ ಮೂಲಕ ಕಾರಿಗೆ ಬೀಳ್ಕೊಟ್ಟರು. ಕೊನೆಗೆ ಅಗೆಯುವ ಯಂತ್ರದಿಂದ ಕಾರಿಗೆ ಮಣ್ಣು ಸುರಿದು ಬೀಳ್ಕೊಟ್ಟರು.
ಸೂರತ್‌ನಲ್ಲಿ ನಿರ್ಮಾಣ ಉದ್ಯಮ ಹೊಂದಿರುವ ಪೋಲಾರಾ, ಮನೆಯಲ್ಲಿ ತಮ್ಮ ಮುಂದಿನ ಜನಾಂಗ ಅದೃಷ್ಟವನ್ನು ನೀಡಿದ ಕಾರನ್ನು ನೆನಪಿಟ್ಟುಕೊಳ್ಳಲು ವಿಭಿನ್ನವಾದದ್ದನ್ನು ಮಾಡಲು ಈ ರೀತಿ ಸಮಾಧಿ ಮಾಡಿದೆ ಎನ್ನುತ್ತಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೋಲಾರಾ, "ನಾನು ಸುಮಾರು 12 ವರ್ಷಗಳ ಹಿಂದೆ ಈ ಕಾರನ್ನು ಖರೀದಿಸಿದೆ, ಇದು ನಮ್ಮ ಕುಟುಂಬಕ್ಕೆ ಸಮೃದ್ಧಿಯನ್ನು ತಂದಿತು. ವ್ಯಾಪಾರದಲ್ಲಿ ಯಶಸ್ಸನ್ನು ನೋಡುವುದರ ಜೊತೆಗೆ ನಮ್ಮ ಕುಟುಂಬಕ್ಕೆ ಗೌರವ ತಂದುಕೊಟ್ಟಿತು. ನನ್ನ ಕುಟುಂಬಕ್ಕೆ ಇದು ತುಂಬಾ ಅದೃಷ್ಟದ ಕಾರು, ಹಾಗಾಗಿ ಕಾರನ್ನು ಮಾರಾಟ ಮಾಡುವ ಬದಲು ಸಮಾಧಿ ಮಾಡಿದೆ ಎನ್ನುತ್ತಾರೆ.
ಸಮಾರಂಭಕ್ಕೆ 4 ಲಕ್ಷ ಖರ್ಚು: ಪೊಲಾರಾ ಅವರು ಸಮಾಧಿ ಕಾರ್ಯಕ್ರಮಕ್ಕೆ 4 ಲಕ್ಷ ಖರ್ಚು ಮಾಡಿದ್ದಾರೆ. ಕಾರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಮುಂದಿನ ಜನಾಂಗ ನೆನಪು ಇಟ್ಟುಕೊಳ್ಳಲು ಗಿಡ ನೆಡಲು ಯೋಜಿಸುತ್ತಿದ್ದಾರೆ. ನಂತರ ಅದು ಬೆಳೆದು ಮರವಾದ ಮೇಲೆ ಅದರಡಿಯಲ್ಲಿ ಕಾರು ಇರುತ್ತದೆ ಎಂಬ ಯೋಚನೆಯಾಗಿದೆ.
ಹಿಂದೂ ಸಂಪ್ರದಾಯ ಪ್ರಕಾರ ಸಮಾಧಿ ಕಾರ್ಯ ನಡೆಸಲಾಗಿದೆ.
Advertisement